
ಮುಳಬಾಗಿಲು,ಮೇ,೧೦-ಜಿಲ್ಲಾ ಜಾತ್ಯತೀತ ಜನತಾದಳದ ಅಧ್ಯಕ್ಷ ಸ್ಥಾನವನ್ನು ನನಗೆ ವಹಿಸಿದರೆ ಜಿಲ್ಲೆಯಲ್ಲಿ ಪಕ್ಷದ ಸಂಘಟನೆಯನ್ನು ಅತ್ಯಂತ ಯಶಸ್ವಿಯಾಗಿ ಸಂಘಟಿಸುತ್ತೇನೆ ಎಂದು ಕೋಮುಲ್ ನಿರ್ದೇಶಕ ಹಾಗೂ ಜಿ.ಪಂ ಮಾಜಿ ಸದಸ್ಯ ಬಿಸನಹಳ್ಳಿ ಬಿ.ವಿ.ಸಾಮೇಗೌಡ ಜೆ,ಡಿ.ಎಸ್. ಹೈ ಕಮಾಂಡ್‌ಗೆ ಮನವಿ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕಳೆದ ಕೆಲ ತಿಂಗಳಿಂದ ಕೋಲಾರ ಜೆಡಿಎಸ್ ಜಿಲ್ಲಾಧ್ಯಕ್ಷ ಸ್ಥಾನ ಬದಲಾವಣೆ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು ನಮ್ಮ ಕುಟುಂಬ ೧೯೭೫ ರಿಂದ ಜನತಾ ಪಕ್ಷದಲ್ಲಿ ನಿರಂತರವಾಗಿ ಗುರುತಿಸಿಕೊಂಡಿದೆ, ಕಳೆದ ಐವತ್ತು ವರ್ಷದಿಂದ ನನ್ನ ತಂದೆ ದಿ||ವೆಂಕಟರಾಮೇಗೌಡ ವಿಪಿ ಚೇರ್ಮನ್ ಆಗಿ ಮಂಡಲ್ ಪಂಚಾಯತಿ ಸದಸ್ಯರಾಗಿ ಪಿ.ಎಲ್.ಡಿ. ಬ್ಯಾಂಕ್ ನಿರ್ದೇಶಕರಾಗಿ ಆರ್‌ಎಂಸಿ ಅಧ್ಯಕ್ಷರಾಗಿ ಜನತಾ ಪರಿವಾರದಲ್ಲಿ ತಮ್ಮದೇ ಆದ ರಾಜಕೀಯ ಇತಿಹಾಸ ಹೊಂದಿದ್ದಾರೆ. ಈ ಹಿನ್ನಲೆಯಲ್ಲಿ ನನಗೆ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಸ್ಥಾನ ಕಲ್ಪಿಸಿ ಕೊಡಬೇಕೆಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಕಳೆದ ೨೦೦೫ರಲ್ಲಿ ಜಿಪಂ ಸದಸ್ಯನಾಗಿ, ನಿರಂತರವಾಗಿ ಮಾಜಿ ಸಚಿವ ದಿ||ಆಲಂಗೂರು ಶ್ರೀನಿವಾಸ್‌ರ ನಾಯಕತ್ವದಲ್ಲಿ ತಾಲೂಕಿನಲ್ಲಿ ಜನತಾದಳ ಸಂಘಟನೆ ಮಾಡಿಕೊಂಡು ಬಂದಿದ್ದೇನೆ. ೨೦೧೫ರಲ್ಲಿ ಮತ್ತೊಮ್ಮೆ ಜಿಪಂ ಸದಸ್ಯ ಸ್ಥಾನಕ್ಕೆ ಕುಮಾರಣ್ಣರ ಆಶೀರ್ವಾದದಿಂದ ಸ್ಪರ್ಧೆ ಮಾಡಿದ್ದೆ, ಆದರೆ ನಮ್ಮ ಪಕ್ಷದ ಕೆಲವು ಮುಖಂಡರ ಹುನ್ನಾರದಿಂದ ಚುನಾವಣೆಯಲ್ಲಿ ಸೋತರು ಸಹ ಮೂರು ಅವಧಿಯಲ್ಲಿ ಜನತಾದಳ ಶಾಸಕರು ಇಲ್ಲದೆ ಇದ್ದರೂ ಇಡೀ ತಾಲೂಕಿನಲ್ಲಿ ಪಕ್ಷದ ಅಧ್ಯಕ್ಷರ ಮುಖಂಡರ ಕಾರ್ಯಕರ್ತರ ಜೊತೆಗೂಡಿ ಸಂಘಟನೆ ಮಾಡುತ್ತಾ ಬಂದಿದ್ದೇನೆ ಎಂದರು.
ಇತ್ತೀಚಿಗೆ ನಡೆದ ಕೋಲಾರ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದೇನೆ ಜೊತೆಗೆ ಜಿಲ್ಲೆಯ ಜೆಡಿಎಸ್ ಮುಖಂಡರ ಒಡನಾಟ ಇರುವುದರಿಂದ ನನ್ನನ್ನು ಪಕ್ಷದ ಜಿಲ್ಲಾ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರೆ ಕುಮಾರಣ್ಣ ಮತ್ತು ನಿಖಿಲ್ ಕುಮಾರಸ್ವಾಮಿ ಅವರ ನಾಯಕತ್ವದಲ್ಲಿ ಪಕ್ಷವನ್ನು ಭದ್ರವಾಗಿ ಸಂಘಟನೆ ಮಾಡುತ್ತೇನೆಂದು ಭರವಸೆ ನೀಡಿದರು.
ಮುಳಬಾಗಿಲು ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಮೃದ್ಧಿ ಮಂಜುನಾಥ್‌ರ ಗೆಲುವಿಗೆ ನಾನು ಪ್ರಮುಖ ಪಾತ್ರ ವಹಿಸಿದ್ದು ಮುಂದೆ ಬರುವ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಸಾಮರ್ಥ್ಯವನ್ನು ಹೊಂದಿದ್ದು ನನಗೆ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ಆಯ್ಕೆ ಮಾಡಿದ್ದಾರೆಂದು ತಿಳಿಸಿದ್ದಾರೆ.





























