
ವಿಜಯಪುರ, ಅ. ೨೫: ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ವಿ. ಚಂದ್ರಕಾಂತ ಅವರು ವಿಜಯಪುರ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡಿದ್ದ ದಸರಾ ಹಾಗೂ ಆಯುಧ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಮಾಜದ ರಕ್ಷಣೆಯೇ ಪೊಲೀಸರ ಮೊದಲ ಕರ್ತವ್ಯವಾಗಿದ್ದು, ಎಲ್ಲರು ಹಬ್ಬವನ್ನು ಆಚರಿಸಿ ಸಂತೋಷಪಟ್ಟ ನಂತರವೇ ಪೊಲೀಸರು ಸಂಭ್ರಮಾಚರಣೆ ಮಾಡುತ್ತಾರೆ ಎಂದು ತಿಳಿಸಿದರು.
ಗ್ರಾಮೀಣ ಭಾಗದಲ್ಲಿಯೂ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಶೇಕಡಾ ೩೫ರಷ್ಟು ಸಿಬ್ಬಂದಿಯ ಕೊರತೆಯಿದ್ದರೂ ಲಭ್ಯವಿರುವ ಸಿಬ್ಬಂದಿ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಜಯಪುರ ಪಟ್ಟಣದಲ್ಲಿ ಸಾರಿಗೆ ಸಮಸ್ಯೆ ಹೆಚ್ಚಾಗಿದ್ದು, ಹೆಚ್ಚುವರಿ ಸಿಬ್ಬಂದಿ ನಿಯೋಜನೆಗಾಗಿ ಮನವಿ ಸಲ್ಲಿಸಲಾಗಿದೆ ಹಾಗೂ ಬಸಪ್ಪನ ತೋಟದ ಬಳಿ ಹೊಸ ಪೊಲೀಸ್ ಠಾಣೆ ನಿರ್ಮಾಣಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ವಿಶೇಷ ಸಂದರ್ಭದಲ್ಲಿ ವೃತ್ತ ನಿರೀಕ್ಷಕ ಲಕ್ಷ್ಮೀನಾರಾಯಣ್, ಸಬ್ ಇನ್ಸ್ಪೆಕ್ಟರ್ ಸುನಿಲ್ ಹಾಗೂ ಸಿಬ್ಬಂದಿ ವರ್ಗ ತಮ್ಮ ಸಮವಸ್ತ್ರದ ಬದಲಾಗಿ ಸಾಂಪ್ರದಾಯಿಕ ಉಡುಗೆಯನ್ನು ಧರಿಸಿ ಆಯುಧ ಪೂಜಾ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.





















