
ತುಮಕೂರು, ಡಿ. ೧೯- ನಗರದ ಸಾಹೇ ವಿಶ್ವವಿದ್ಯಾಲಯ ಮತ್ತು ಸಂಯೋಜಿತ ಶಿಕ್ಷಣ ಸಂಸ್ಥೆಯಾದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಎನರ್ಜಿ ಕ್ಲಬ್ ಅಂಡ್ ಇನ್ಸ್ಟಿಟ್ಯೂಷನ್ ಇನ್ನೋವೇಶನ್ ಕೌನ್ಸಿಲ್ ಸಂಯುಕ್ತವಾಗಿ “ರಾಷ್ಟ್ರೀಯ ವಿದ್ಯುಚ್ಛಕ್ತಿ ಉಳಿತಾಯ ಜಾಗೃತಿ” ಅಂಗವಾಗಿ ಎಸ್‌ಎಸ್‌ಐಟಿ ಕ್ಯಾಂಪಸ್‌ನಲ್ಲಿ ಹೆಚ್‌ಎಂಜಿ ವೃತ್ತದಿಂದ ಮುಖ್ಯ ದ್ವಾರದವರೆಗೆ “ವಾಕ್‌ಥಾನ್’ ಆಯೋಜಿಸಲಾಗಿತ್ತು.
ಡಿ. ೧೫ ರಿಂದ ೨೧ ರವರೆಗೆ ಆಚರಿಸಲಾಗುತ್ತಿರುವ ನ್ಯಾಷನಲ್ ಎನರ್ಜಿ ಕನ್ಸರ್ವೇಷನ್ ಮತ್ತು ಎನರ್ಜಿ ಎಫಿಶಿಯೆನ್ಸಿ ಸಪ್ತಾಹದ ೩ ನೇ ದಿನದ ಅಂಗವಾಗಿ ವಿದ್ಯುಚ್ಛಕ್ತಿ ಉಳಿತಾಯ ಮತ್ತು ಸದ್ಭಳಕೆ ಕುರಿತು ಜಾಗೃತಿ ಮೂಡಿಸಲಾಯಿತು.
ವಾಕಥಾನ್‌ಗೆ ಹಸಿರು ನಿಶಾನೆ ತೋರಿ ಮಾತನಾಡಿದ ಸಾಹೇ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಕೆ ಬಿ ಲಿಂಗೇಗೌಡ, ಅನವಶ್ಯಕವಾಗಿ ಉರಿಯುತ್ತಿರುವ ವಿದ್ಯುತ್ ದೀಪ ಮತ್ತು ಉಪಕರಣಗಳನ್ನು ನಂದಿಸಬೇಕು. ಈ ನಡೆಯು ಪ್ರಕೃತಿ ಸ್ನೇಹಿಯು ಹೌದು. ಹಣದ ಉಳಿತಾಯವೂ ಹೌದು ಎಂಬುದನ್ನು ಮನದಟ್ಟು ಮಾಡಿದರು.
ಸೌರಶಕ್ತಿಯನ್ನು ಪರಿಣಾಮಕಾರಿಯಾಗಿ ಬಳಸಬೇಕು. ಸಾಹೇ ವಿಶ್ವವಿದ್ಯಾಲಯದಲ್ಲಿ ಈಗಾಗಲೇ ಸೌರಶಕ್ತಿ ಘಟಕಗಳನ್ನು ಹೊಂದಿದೆ. ಬೇರೆ ಯಾವ ವಿಶ್ವವಿದ್ಯಾನಿಲಯಗಳಲ್ಲಿ ಸೌರಶಕ್ತಿ ಬಳಸುತ್ತಿಲ್ಲ. ಒಮ್ಮೆ ಸಾಹೇ ವಿವಿಗೆ ಭೇಟಿ ನೀಡಿ ಸೌರಶಕ್ತಿ ಘಟಕವನ್ನು ವೀಕ್ಷಿಸಬಹುದು ಎಂದರು.
ಇದೇ ವೇಳೆ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಹಾಗೂ ಸಾಹೇ ಸಂಯೋಜಿತ ಎಲ್ಲ ಕಾಲೇಜುಗಳು ಪಾಲ್ಗೊಂಡಿರುವುದನ್ನು ಕಂಡು ಅಭಿನಂದಿಸುತ್ತ ತಮ್ಮ ಹರ್ಷ ವ್ಯಕ್ತಪಡಿಸಿದರು.
ಸಾಹೇ ಕುಲಸಚಿವರಾದ ಡಾ. ಅಶೋಕ್ ಮೆಹ್ತಾ ಮಾತನಾಡಿ, ಪುನರ್ ಬಳಕೆ ಇಂಧನಗಳಾದ ಸೌರಶಕ್ತಿ, ವಾಯುಶಕ್ತಿ ಹೀಗೇ ದೊರಕುವ ಹಸಿರು ಇಂಧನಗಳನ್ನು ಪರಿಣಾಮಕಾರಿಯಾಗಿ ಬಳಸುವ ಮೂಲಕ ನಾವು ವಿದ್ಯುತ್ ಶಕ್ತಿಯನ್ನು ಉಳಿಸಬಹುದು ಜತೆಗೆ ಪರಿಸರ ರಕ್ಷಣೆಗೆ ಕೈ ಜೋಡಿಸಬಹುದು ಎಂದು ತಿಳಿಸಿದರು.
ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎಂ.ಎಸ್. ರವಿಪ್ರಕಾಶ ಮಾತನಾಡಿ, ವಿದ್ಯುತ್ ಶಕ್ತಿಯನ್ನು ಸಂರಕ್ಷಿಸಲು ಅನುಕೂಲಕರವಾದ ಎಲ್ಲ ಮೂಲದ ಪರಿಸರ ಸ್ನೇಹಿಯಾದ ಪರ್ಯಾಯ ಮೂಲ ಇಂಧನಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಹಾಗೂ ಇದರ ಬಗ್ಗೆ ಇತರರಿಗೂ ಜಾಗೃತಿ ಮೂಡಿಸುವ ಮೂಲಕ ಸಾಧ್ಯವಾದಷ್ಟು ಅವರು ಬಳಸುವಂತೆ ಪ್ರೇರೇಪಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವಾಕ್‌ಥಾನ್‌ಗೂ ಮುನ್ನ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಿಂದ ವಿದ್ಯುಚ್ಛಕ್ತಿ ಉಳಿತಾಯ ಜಾಗೃತಿ ಮೂಡಿಸುವ ಬೀದಿ ನಾಟಕ ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಎಸ್‌ಎಸ್‌ಐಟಿಯ ಡೀನ್ (ಅಕಾಡೆಮಿಕ್) ಡಾ. ರೇಣುಕಾಲತಾ, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು ಹಾಗೂ ಎನರ್ಜಿ ಕ್ಲಬ್‌ನ ಸಂಯೋಜಕರಾದ ಡಾ ಎನ್ ಪ್ರದೀಪ್, ಇನ್ಸ್ಟಿಟ್ಯೂಷನ್ ಇನ್ನೋವೇಶನ್ ಕೌನ್ಸಿಲ್‌ನ ಸಂಯೋಜಕ ಡಾ.ಪ್ರವೀಣ್‌ಕುಮಾರ್ ಸಿ., ಎನ್‌ಸಿಸಿ ಅಧಿಕಾರಿ ಡಾ. ಜಯಪ್ರಕಾಶ್, ಎನ್‌ಎಸ್‌ಎಸ್ ಸಂಯೋಜಕಡಾ ರವಿಕಿರಣ್, ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಬಿ.ಟಿ.ಮುದ್ದೇಶ್, ಶ್ರೀ ಸಿದ್ಧಾರ್ಥ ವ್ಯವಹಾರ ನಿರ್ವಹಣಾ ಸಂಸ್ಥೆಯ ಪ್ರಾಂಶುಪಾಲರಾದ ಡಾ.ಮಮತ, ಶ್ರೀ ಸಿದ್ಧಾರ್ಥ ಇನ್ಸಿಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನ ಸಿಬ್ಬಂದಿ ವರ್ಗ ಮತ್ತು ಎಂಜಿನಿಯರಿಂಗ್ ಕಾಲೇಜಿನ ಎಲ್ಲಾ ವಿಭಾಗದ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.




























