
ಸಿರಾ, ಸೆ. ೨೨- ಕಲ್ಲಿಗಾನಹಟ್ಟಿಯ ಕನಸು ಯುವಜನ ಸಂಘದ ವತಿಯಿಂದ ಗಣೇಶ ಪೂಜಾ ಕಾರ್ಯಕ್ರಮದ ಪ್ರಯುಕ್ತ ಗ್ರಾಮಸ್ಥರಿಗೆ ಅಂಚೆ ಕಚೇರಿಯಲ್ಲಿನ ವಿವಿಧ ಉಳಿತಾಯ ಯೋಜನೆಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ನವ್ಯದಿಶ ಸಂಸ್ಥೆಯ ಅಶ್ವಿನಿಯವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಅಂಚೆ ಕಚೇರಿಯ ಕಾರ್ಯವೈಖರಿ, ವಿವಿಧ ಉಳಿತಾಯ ಖಾತೆಗಳು, ವಿಮಾ ಯೋಜನೆಗಳು ಹಾಗೂ ಉಳಿತಾಯದ ಮಹತ್ವದ ಕುರಿತು ಮಾಹಿತಿ ನೀಡಿದರು. ಕುಟುಂಬದ ಆರ್ಥಿಕ ಭದ್ರತೆ ಮತ್ತು ಭವಿಷ್ಯದ ಅಗತ್ಯಗಳಿಗಾಗಿ ನಿಯಮಿತ ಉಳಿತಾಯದ ಮಹತ್ವವನ್ನು ಅವರು ವಿವರಿಸಿದರು.
ಇದೇ ಸಂದರ್ಭದಲ್ಲಿ ಕನಸು ಯುವಜನ ಸಂಘದ ಸದಸ್ಯರು ತಮ್ಮನ್ನು ಹಾಗೂ ಸಂಘದ ಉದ್ದೇಶ ಮತ್ತು ಚಟುವಟಿಕೆಗಳನ್ನು ಗ್ರಾಮಸ್ಥರಿಗೆ ಪರಿಚಯಿಸಿಕೊಂಡರು. ಯುವಜನರ ಸಕ್ರಿಯ ಭಾಗವಹಿಸುವಿಕೆ ಹಾಗೂ ಸಮುದಾಯದ ಅಭಿವೃದ್ಧಿಯಲ್ಲಿ ಯುವ ಸಂಘಟನೆಗಳ ಪಾತ್ರದ ಕುರಿತು ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಭಾನು ಪ್ರಿಯಾ, ಯಶಸ್ವಿನಿ, ಶಶಿಕಲಾ, ಯಶೋಧಾ, ಹೇಮಶ್ರೀ, ಕಾಂಚನ, ಸಂಧ್ಯಾ, ಅಂಜಲಿ, ವರ್ಧನ್, ಮನ್ವಿತ್, ಇಂಚರ, ಮಾನ್ಯ, ಚಿದಾನಂದ, ಚಾರು ಪ್ರಿಯ ಹಾಗೂ ಸುದರ್ಶನ್ ಸೇರಿದಂತೆ ೬೦ಕ್ಕೂ ಹೆಚ್ಚು ಗ್ರಾಮಸ್ಥರು ಭಾಗವಹಿಸಿದ್ದರು.
ಕಾರ್ಯಕ್ರಮವು ಗ್ರಾಮಸ್ಥರಲ್ಲಿ ಉಳಿತಾಯದ ಮಹತ್ವ ಹಾಗೂ ಅಂಚೆ ಕಚೇರಿಯ ವಿವಿಧ ಸೇವೆಗಳ ಕುರಿತು ಅರಿವು ಮೂಡಿಸುವಲ್ಲಿ ಸಹಕಾರಿಯಾಯಿತು.


























