ಸೈದಾಪುರ:ಅ.೧೪: ವಿಶೇಷವಾಗಿ ಮಕ್ಕಳು, ಹದಿಹರೆಯದವರು ಕಾನೂನಿನ ಬಗ್ಗೆ ತಜ್ಞರಿಂದ ಅರಿವು ಹೊಂದುವುದು, ಗರ್ಭಿಣಿ, ಬಾಣಂತಿಯರು ಅಪೌಷ್ಟಿಕತೆಯ ನಿವಾರಣೆಗೆ ಸರ್ಕಾರ ನೀಡುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅಂಗನವಾಡಿ ಮೇಲ್ವಿಚಾರಕಿ ಅನಿತಾ ದೊಡ್ಡಮನಿ ಸಲಹೆ ನೀಡಿದರು.
ಸಮೀಪದ ಗ್ರಾಮ ಸೈದಾಪುರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೋಷಣೆ ಅಭಿಯಾನ ಮತ್ತು ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಉತ್ತಮ ಆರೋಗ್ಯಕ್ಕೆ ಸಿರಿಧಾನ್ಯಗಳು, ಹಣ್ಣು , ಹಸಿರು ತರಕಾರಿ, ಮೊಳಕೆ ಕಾಳುಗಳು, ಬೆಲ್ಲ ಸೇರಿದಂತೆ ಸಮತೋಲನ ಆಹಾರ ನಿತ್ಯ ಸೇವನೆ ಮಾಡಬೇಕು ಎಂದರು.
ಇದಕ್ಕೂ ಮೊದಲು ಕಾರ್ಯಕ್ರಮದಲ್ಲಿ ಭಾಗವಹಿಸಿದ ಗರ್ಭಿಣಿಯರಿಗೆ ಸಾಂಪ್ರಾದಾಯಿಕವಾಗಿ ಹೂ-ಹಣ್ಣು, ವಸ್ತ್ರ ನೀಡಿ ಸೀಮಂತ ಮತ್ತು ಚಿಕ್ಕ ಮಕ್ಕಳಿಗೆ ಅನ್ನ ಪ್ರಾಶಾನ ಮಾಡಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕವಿತಾ ಮಿರಿಯಾಲ, ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಅನಿತಾ, ಕಾನೂನು ಸೇವಾ ಪ್ರಾಧಿಕಾರದ ನ್ಯಾಯವಾದಿಗಳಾದ ಮಲ್ಲಿಕಾರ್ಜುನ, ಶಿವರಾಜ ಕಟ್ಟಿಮನಿ ,ಪರಶುರಾಮ, ಅಜೀಂ ಪ್ರೇಮ್ ಜಿ ಫೌಂಡೇಶನ್ ಸಂಯೋಜಕ ಮಲ್ಲೇಶ, ಸೈದಾಪುರ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಶ್ವಿನಿ, ಕವಿತಾ ವಿಭೂತಿಹಳ್ಳಿ, ಆರೋಗ್ಯ ಅಧಿಕಾರಿ ದೇವಿಂದ್ರಪ್ಪ, ಶೇಕ್ ಹುಸೇನ್, ವಿವಿಧ ಗ್ರಾಮಗಳಿಂದ ಆಗಮಿಸಿದ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗರ್ಭಿಣಿ, ಬಾಣಂತಿಯರು, ಮಕ್ಕಳು, ಗ್ರಾಮಸ್ಥರು, ಸೇರಿದಂತೆ ಇತರರಿದ್ದರು.
























