Home ಜಿಲ್ಲೆ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಬಂದಿಗಳಿಗೆ ಉನ್ನತ ಶಿಕ್ಷಣಪಡೆಯುವ ಕುರಿತು ಜಾಗೃತಿ ಮತ್ತು ಅರಿವು ಕಾರ್ಯಕ್ರಮ

ಕೇಂದ್ರ ಕಾರಾಗೃಹದಲ್ಲಿರುವ ಬಂದಿಗಳಿಗೆ ಉನ್ನತ ಶಿಕ್ಷಣಪಡೆಯುವ ಕುರಿತು ಜಾಗೃತಿ ಮತ್ತು ಅರಿವು ಕಾರ್ಯಕ್ರಮ

ಕಲಬುರಗಿ, ಮಾ.06-ಕರ್ನಾಟಕ ರಾಜ್ಯ ಮುಕ್ತ ವಿದ್ಯಾನಿಲಯ ಪ್ರಾದೇಶಿಕ ಕೇಂದ್ರ ಕಲಬುರಗಿ/ಬೀದರ್ ಹಾಗೂ ಕೇಂದ್ರ ಕಾರಾಗೃಹ ಕಲಬುರಗಿ ಸಹಯೋಗದೊಂದಿಗೆ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಬಂದಿಗಳಿಗೆ ಉನ್ನತ ಶಿಕ್ಷಣ ಪಡೆಯುವ ಕುರಿತು ಜಾಗೃತಿ ಮತ್ತು ಅರಿವಿನ ಕಾರ್ಯಕ್ರಮವನ್ನು (ಮಾರ್ಚ್ 3 ರಂದು) ಮಂಗಳವಾರ ಹಮ್ಮಿಕೊಳ್ಳಲಾಯಿತು
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಸಂಗಮೇಶ್ ಹಿರೇಮಠ ಅವರು ಮಾತನಾಡಿ, ಜೀವನದಲ್ಲಿ ಶಿಕ್ಷಣವು ಅತ್ಯಗತ್ಯವಾಗಿದ್ದು, ಜ್ಞಾನ, ಆತ್ಮವಿಶ್ವಾಸ ಮತ್ತು ಉತ್ತಮ ವ್ಯಕ್ತಿತ್ವವನ್ನು ರೂಪಸಲಿದೆ. ಕಾರಾಗೃಹದ ಬಂದಿಗಳು ಉನ್ನತ ಶಿಕ್ಷಣವನ್ನು ಪಡೆದು ಕುಟುಂಬ ಮತ್ತು ಸಮಾಜಕ್ಕೆ ಒಳ್ಳೆಯ ನಾಗರಿಕರಾಗಿ ತಮ್ಮದೇ ಆದ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕೆಎಸ್‍ಓಯು ಕಲಬುರಗಿ ಶಾಖೆಯ ನಿರ್ದೇಶಕ ಹನುಮಂತ್ ಕಾಳನೂರ್ ಅವರು ಮಾತನಾಡಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಅಡಿಯಲ್ಲಿ ಬರುವ ಕೋರ್ಸ್‍ಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಈ ಸಂಸ್ಥೆಯ ಮುಖ್ಯ ಅಧೀಕ್ಷಕರಾದ ಕೆ. ಸುರೇಶ್ ಅವರು ಮಾತನಾಡಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಕಲಬುರಗಿ ಪ್ರಾದೇಶಿಕ ಕೇಂದ್ರವು ಉನ್ನತ ಶಿಕ್ಷಣದ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದು, ಕೇಂದ್ರ ಕಾರಾಗೃಹದ ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಣವನ್ನು ಪಡೆಯಲು ಮುಂದೆ ಬರಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧೀಕ್ಷಕ ರಾಕೇಶ್ ಕಾಂಬ್ಳೆ, ಸಹಾಯಕ ಅಧೀಕ್ಷಕ ಚನ್ನಪ್ಪ ಯಟಗಲ್, ಕೆಎಸ್‍ಓಯು ಸಿಬ್ಬಂದಿಗಳಾದ ಪವನ್ ಕುಮಾರ್, ಸಿದ್ದಯ್ಯ, ಭೋಜಪ್ಪ, ಕರ್ನಲ್ ಕಿರಣ ಕುಮಾರ್, ಸಂಸ್ಥೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಈ ಸಂಸ್ಥೆಯ ಶಿಕ್ಷಕರಾದ ನಾಗರಾಜ್ ಮುಲಗೆ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಸಂಸ್ಥೆಯ ಕಚೇರಿ ಸಹಾಯಕ ಆಡಳಿತಾಧಿಕಾರಿ ಭೀಮಾಶಂಕರ ಡಾಂಗೆ ಅವರು ವಂದಿಸಿದರು.