
ಸಂಜೆವಾಣಿ ವಾರ್ತೆ
ವಿಜಯಪುರ, ಡಿ. ೨೩:ಇಂದಿನ ಸಮಾಜದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಮುನ್ನಡೆಯುತ್ತಿದ್ದು, ಅವರ ಅಭಿವೃದ್ಧಿಗೆ ಜೀವನ ಕೌಶಲ್ಯ ಹಾಗೂ ವೃತ್ತಿ ಕೌಶಲ್ಯಗಳ ಅರಿವು ಮತ್ತು ಅಭ್ಯಾಸ ಅಗತ್ಯವೆಂದು ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ, ದೈಹಿಕ ಶಿಕ್ಷಣ ಅಧ್ಯಯನ ಮತ್ತು ಕ್ರೀಡಾ ವಿಜ್ಞಾನ ವಿಭಾಗ ಮತ್ತು ದೈಹಿಕ ಶಿಕ್ಷಣ ನಿರ್ದೆಶನಾಲಯದ ಸಹಯೋಗದಲ್ಲಿ ಪಿ.ಎಂ.ಉಷಾ ಯೋಜನೆ ಅಡಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ “ಉದ್ಯೋಗ ಮತ್ತು ಜೀವನದ ಸಮತೋಲನ” ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಇಂದು ಶಿಕ್ಷಣ, ಉದ್ಯೋಗ, ಉದ್ಯಮ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಪ್ರಭಲವಾಗಿ ಬೆಳೆಯುತ್ತಿರುವುದು ಗಮನಾರ್ಹವಾಗಿದೆ. ಈ ಬೆಳವಣಿಗೆ ದೀರ್ಘಕಾಲಿಕವಾಗಿರಲು ಜೀವನದ ಕೌಶಲ್ಯಗಳು ಮತ್ತು ವೃತ್ತಿಗೆ ಸಂಬAಧಿಸಿದ ಕೌಶಲ್ಯಗಳನ್ನು ಸಮರ್ಪಕವಾಗಿ ಕಲಿತು ಅಳವಡಿಸಿಕೊಳ್ಳಬೇಕು. ಇದರಿಂದ ಮಹಿಳೆಯರು ತಮ್ಮ ವೈಯಕ್ತಿಕ ಹಾಗೂ ವೃತ್ತಿಪರ ಬದುಕಿನಲ್ಲಿ ಸಮತೋಲನ ಸಾಧಿಸಿ ಸುಂದರ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಡಾ. ತ್ರೀವೆಣಿ ಅನಂತ್‌ರಾಮನ್ ಮಾತನಾಡಿ, ಮಹಿಳೆಯರು ದೈಹಿಕ ಹಾಗೂ ಮಾನಸಿಕ ಸದೃಢತೆಯನ್ನು ಬೆಳೆಸಿಕೊಂಡು ವೈಯಕ್ತಿಕ ಜೀವನ, ವೃತ್ತಿ ಜೀವನ ಮತ್ತು ಸಮುದಾಯ ಜೀವನವನ್ನು ಸಮತೋಲನವಾಗಿ ನಿಭಾಯಿಸಲು ಆತ್ಮವಿಶ್ವಾಸ ಮತ್ತು ಉತ್ತಮ ಜ್ಞಾನ ಅತ್ಯಗತ್ಯವೆಂದು ಹೇಳಿದರು.
ಮತ್ತೋರ್ವ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಡಾ. ಭಾರತಿ ಗಾಣಿಗೇರ ಮಾತನಾಡಿ, ಮಹಿಳೆಯರು ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಸಮತೋಲನ ಸಾಧಿಸಲು ತಾಳ್ಮೆ ಹಾಗೂ ವೃತ್ತಿಪರ ಕೌಶಲ್ಯಗಳು ಅತ್ಯಂತ ಮುಖ್ಯವೆಂದು ತಿಳಿಸಿದರು. ಇದಕ್ಕಾಗಿ ಮಹಿಳೆಯರು ತಾಳ್ಮೆಯಿಂದ ಮನೆ ಹಾಗೂ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಕೌಶಲ್ಯಗಳನ್ನು ಕಲಿಯಬೇಕು ಎಂದು ಹೇಳಿದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ವಿವಿಯ ಪ್ರಾಧ್ಯಾಪಕ ಡಾ. ಉದಯಕುಮಾರ ಕುಲಕರ್ಣಿ, ಮಾತನಾಡಿ, ವೃತ್ತಿಪರ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿಭಾಯಿಸುವ ಜೊತೆಗೆ ಕುಟುಂಬ, ಸ್ನೇಹಿತರು ಹಾಗೂ ಸ್ವಯಂ ಜೀವನಕ್ಕೆ ಬೇಕಾದ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದು ಸಮತೋಲನ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು
ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ಮುಖ್ಯಸ್ಥ ಪ್ರೊ. ಹನುಮಂತಯ್ಯ ಪೂಜಾರಿ ಮಾತನಾಡಿ, ಇಂದಿನ ಸಮಾಜದಲ್ಲಿ ಮಹಿಳೆಯರು ವೃತ್ತಿ ಮತ್ತು ವೈಯಕ್ತಿಕ ಜೀವನವನ್ನು ಒತ್ತಡವಿಲ್ಲದೆ ಸಾಗಿಸಲು ಅಗತ್ಯವಾದ ಕೌಶಲ್ಯಗಳನ್ನು ಕಲಿಯಬೇಕು ಅಷ್ಟೇ ಅಲ್ಲದೇ ಇದಕ್ಕಾಗಿ ಉತ್ತಮ ಓದು, ಕ್ರೀಡೆ, ಸಂಗೀತ ಹಾಗೂ ಇತರೆ ಹವ್ಯಾಸಗಳನ್ನು ಬೆಳೆಸಿಕೊಂಡು ಜೀವನವನ್ನು ಸುಂದರವಾಗಿ ರೂಪಿಸಿಕೊಳ್ಳಬಹುದು ಎಂದು ಹೇಳಿದರು.
ನಿರ್ದೆಶಕರು,ವಿಕೇಪಾ,ನಿರ್ದೆಶನಾಲಯ, ಡಾ.ಜ್ಯೋತಿ ಉಪಾಧ್ಯಾಯ ಪ್ರಸ್ತಾವಿಕ ನುಡಿಗಳನ್ನಾಡಿ, ಸ್ವಾಗತಿಸಿದರು. ಅಪೇಕ್ಷಾ ಜಗತಾಪ್ ಹಾಗೂ ಅಶ್ವಿನಿ ಆರ್.ಎಸ್, ಅತಿಥಿಗಳನ್ನು ಪರಿಚಯಿಸಿದರು. ಸಂಧ್ಯಾ ನಿರೂಪಿಸಿದರು. ಮಲಕಮ್ಮ ವಂದಿಸಿದರು. ಜ್ಯೋತಿ ದೊಡ್ಡಮನಿ ಪ್ರಾರ್ಥಿಸಿದರು.
ಕಾರ್ಯಕ್ರಮದಲ್ಲಿ ವಿಜಯಪುರದ ೩೦ ಜನ ವೃತ್ತಿ ನಿರತ ಮಹಿಳೆಯರು ಹಾಗೂ ದೈಹಿಕ ಶಿಕ್ಷಣ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳು, ಬಿಪಿಇಡಿ ಮತ್ತು ಎಂಪಿಇಡಿ ವಿದ್ಯಾರ್ಥಿನಿಯರು ಹಾಗೂ ಅತಿಥಿ ಉಪನ್ಯಾಸಕರು ಮತ್ತಿತರಿದ್ದರು.
























