ಮಹಿಳಾ ದೌರ್ಜನ್ಯದ ವಿರುದ್ಧ ಜಾಗೃತಿ ಅಗತ್ಯ

ಕಲಬುರಗಿ:ನ.25: ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಜಾಗೃತಿ ಮೂಡಿಸುವುದು, ಅದನ್ನು ನಿಲ್ಲಿಸುವುದು ಮತ್ತು ಮಹಿಳೆಯರಿಗೆ ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ. ಅತ್ಯಾಚಾರ, ಕೌಟುಂಬಿಕ ಹಿಂಸೆ ಮತ್ತು ಇತರ ರೀತಿಯ ದೌರ್ಜನ್ಯಗಳು ಸಂಪೂರ್ಣವಾಗಿ ನಿಲ್ಲಬೇಕಾಗಿದೆ ಎಂದು ಯುವ ಚಿಂತಕಿ ಪೂಜಾ ಹೂಗಾರ ಅಭಿಮತಪಟ್ಟರು.
ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‍ನಲ್ಲಿನ ‘ಸಕ್ಸಸ್ ಕಂಪ್ಯೂಟರ ತರಬೇತಿ ಕಏಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಮಂಗಳವಾರ ಬೆಳಿಗ್ಗೆ ಏರ್ಪಡಿಸಿದ್ದ ‘ಅಂತಾರಾಷ್ಟ್ರೀಯ ಮಹಿಳಾ ದೌರ್ಜನ್ಯ ವಿರೋಧಿ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉಪನ್ಯಾಸಕ ಎಚ್.ಬಿ.ಪಾಟೀಲ್ ಮಾತನಾಡಿ, ಪ್ರತಿ ವರ್ಷ ನವೆಂಬರ್-25ರಂದು ಈ ದಿನವನ್ನು ಆಚರಿಸಲಾಗುತ್ತದೆ. ಪ್ರಪಂಚದಾದ್ಯಂತ ಮಹಿಳೆಯರ ಸಮಸ್ಯೆಗಳು ಮತ್ತು ಪರಿಹಾರಗಳ ಬಗ್ಗೆ ಬೆಳಕು ಚೆಲ್ಲುವುದು ದಿನದ ಉದ್ದೇಶವಾಗಿದೆ. ದೌರ್ಜನ್ಯಗಳು ಕಡಿಮೆಯಾದಂತೆ ಕಂಡರೂ ದೌರ್ಜನ್ಯದ ರೂಪಗಳು ಬದಲಾಗಿದೆ. ಹೆಣ್ಣುಮಕ್ಕಳು ಹೇಳಿಕೊಂಡ ಸಂಕಟಗಳಿಗಿಂತ ಹೇಳಿಕೊಳ್ಳಲಾರದ ಸಂಕಟಗಳು ಹೆಚ್ಚುತ್ತಿವೆ ಎಂದರು.
ಭಾರತ ಸರ್ಕಾರ 2005ರಲ್ಲಿ ಕೌಟುಂಬಿಕ ಹಿಂಸೆಯಿಂದ ಕೌಟುಂಬಿಕ ದೌರ್ಜನ್ಯವನ್ನು ಕೇವಲ ಕಾನೂನಿನ ಸಮರ ಮಾತ್ರವಲ್ಲದೆ ಇದು ಸಾಮಾಜಿಕ ಸಮಸ್ಯೆಯಾಗಿ ಪರಿಗಣಿಸಲಾಗಿದೆ. ಕೌಟುಂಬಿಕ ದೌರ್ಜನ್ಯ ಕಾಯ್ದೆಯಿದೆ. ಕೇವಲ ಗಂಡ, ಅತ್ತೆ, ಮಾವ, ಅವರವರಲ್ಲದೇ ಒಂದೇ ಸೂರಿನಡಿಯಲ್ಲಿ ವಾಸಿಸುತ್ತಿರುವ ಯಾವುದೋ ವ್ಯಕ್ತಿಯಿಂದ ಮಹಿಳೆ ಹಿಂಸೆಯನ್ನು ಅನುಭವಿಸುತ್ತಿದ್ದರೆ ಇದು ಈ ಕಾನೂನಿನಡಿಯಲ್ಲಿ ಹಿಡಿದಿಟ್ಟುಕೊಂಡಿದೆ. ಈ ಕಾಯ್ದೆಯ ಸಂರಕ್ಷಣಾ ಅಧಿಕಾರಿಗಳಿಂದ ಬಾಧಿತ ಮಹಿಳೆ ಸಹಾಯವನ್ನು ಕೋರಬಹುದು. ನ್ಯಾಯಾಲಯದಿಂದ ಹಣಕಾಸಿನ ಪರಿಹಾರದ ಆಯ್ಕೆಯು ಅವಳಿಗಿದೆ. ಮಕ್ಕಳನ್ನು ತನ್ನ ಹಾರೈಕೆಗೆ ಕೇಳುವ ಅವಕಾಶವು ಮಹಿಳೆಗಿದೆ. ಈ ಎಲ್ಲ ರೀತಿಯ ಹಕ್ಕು ಮತ್ತು ಅವಕಾಶಗಳು ಈ ಕಾನೂನಿನಡಿಯಲ್ಲಿ ಮಹಿಳೆಗೆ ದೊರಕುತ್ತವೆ. ಅವಕಾಶಗಳನ್ನು ಬಳಸಿಕೊಳ್ಳುವ ಸುಗಮ ದಾರಿ, ತಿಳಿವಳಿಕೆ, ಇವೆಲ್ಲವನ್ನು ನಮ್ಮ ಪ್ರಜ್ಞಾವಂತ ವ್ಯವಸ್ಥೆ ಗೌರವಯುತವಾಗಿ ಒದಗಿಸಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಶಿಕ್ಷಕಿಯರಾದ ಕಾವೇರಿ ಹೌದೆ, ಸ್ನೇಹಾ ಚೌಹಾಣ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.