ಕಲಬುರಗಿ,ಆ.12-ಇಲ್ಲಿನ ಆದರ್ಶ ನಗರದ ಕೆಸಿಇಡಿಟಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಮತ್ತು ಎಲ್‍ಕೆಜಿಯಿಂದ 9ನೇ ವರ್ಗದವರೆಗಿನ ಎಲ್ಲಾ ವರ್ಗಗಳ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಮಾರ್ಚ್ 2025ರ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.96.32 ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದ ಕುಮಾರಿ ಗೌರಿ ತಂದೆ ಮಹಾರುದ್ರಪ್ಪ ಅವರಿಗೆ ಶಾಸಕ ಅಲ್ಲಮಪ್ರಭು ಪಾಟೀಲ ಅವರು ನಗದು ಬಹುಮಾನ ಮತ್ತು ಪ್ರಶಸ್ತಿ ನೀಡಿ ಗೌರವಿಸಿದರು. ಅಲ್ಲದೆ ಎಲ್‍ಕೆಜಿಯಿಂದ 9ನೇ ತರಗತಿಯವರೆಗಿನ ಎಲ್ಲಾ ವರ್ಗಗಳ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳ ಜೊತೆಗೆ ಅವರ ಪಾಲಕರನ್ನು ಸತ್ಕರಿಸಿದ್ದು, ವಿಶೇಷವಾಗಿತ್ತು.
ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಶಾಸಕ ಅಲ್ಲಮಪ್ರಭು ಪಾಟೀಲ ಅವರು, ಪ್ರಶಸ್ತಿ ಪಡೆದ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರಲ್ಲದೆ ಉಳಿದ ವಿದ್ಯಾರ್ಥಿಗಳು ಇದರಿಂದ ಸ್ಪೂರ್ತಿ ಪಡೆದು ಮುಂದಿನ ವರ್ಷ ತಾವೂ ಕೂಡ ಹೆಚ್ಚು ಅಂಕಗಳನ್ನು ಪಡೆದು ಶಾಲೆಗೆ ಗೌರವ ತರಬೇಕು ಎಂದು ಕರೆ ನೀಡಿದರು.
ಆಡಳಿತ ಮಂಡಳಿಯ ಮನವಿಗೆ ಸ್ಪಂದಿಸಿದ ಶಾಸಕರು ಹೆಚ್ಚುವರಿ ಕೋಣೆ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ 5 ಲಕ್ಷ ರೂ.ಅನುದಾನ ನೀಡುವುದಾಗಿ ಘೋಷಿಸಿದರು.
ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಸೂರ್ಯಕಾಂತ ಮದಾನೆ ಅವರು ಶಾಲಾ ವಾರ್ಷಿಕ ಪತ್ರಿಕೆ ವಿದ್ಯಾವಿಕಾಸ ಲೋಕಾರ್ಪಣೆ ಮಾಡಿ ಶಾಲೆಯ ಮುಖ್ಯೋಪಾಧ್ಯಾಯಿನಿ ಮೀನಾಕ್ಷಿ ಪಲ್ಲೇದ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೆಸಿಇಡಿಟಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಅಪ್ಪಾರಾವ ಅಕ್ಕೋಣಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಜಯಶ್ರೀ ಹಿರೇಮಠ ವಂದಿಸಿದರು. ಶಾಲಾ ಆಡಳಿತ ಮಂಡಳಿ ಸದಸ್ಯರು, ವಿದ್ಯಾರ್ಥಿಗಳು ಮತ್ತು ಪಾಲಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.






















