
ಹಾನಗಲ್,ಮೇ30: ತಹಶೀಲ್ದಾರ್ ಕಚೇರಿಯಲ್ಲಿ ಬಾಕಿ ಇರುವ ಕಡತಗಳನ್ನು ನಿಗದಿತ ಅವಧಿಯೊಳಗೆ ಇತ್ಯರ್ಥ ಪಡಿಸಿ, ಸಾರ್ವಜನಿಕರ ಅಲೆದಾಟ ತಪ್ಪಿಸುವಂತೆ ಶಾಸಕ ಶ್ರೀನಿವಾಸ ಮಾನೆ ಅವರು ತಹಶೀಲ್ದಾರ್ ರೇಣುಕಾ ಎಸ್. ಅವರಿಗೆ ಸೂಚಿಸಿದರು.
ಇಲ್ಲಿನ ತಮ್ಮ ಜನಸಂಪರ್ಕ ಕಚೇರಿಯಲ್ಲಿ ತಹಶೀಲ್ದಾರ್ ಅವರೊಂದಿಗೆ ಸಭೆ ನಡೆಸಿ, ತಾಲೂಕಿನ ಕೆಲ ಗ್ರಾಮಗಳಲ್ಲಿ ಹೊಲಗಳಿಗೆ ತೆರಳುವ ರಸ್ತೆಗಳು ಒತ್ತುವರಿಯಾಗಿ ರೈತರಿಗೆ ತೊಂದರೆಯಾಗುತ್ತಿದೆ. ಪರಿಶೀಲನೆ ಕೈಗೊಂಡು ಒತ್ತುವರಿ ತೆರವುಗೊಳಿಸಲು ಕಾನೂನು ಕ್ರಮ ಕೈಗೊಳ್ಳಿ. ಗ್ರಾಮಠಾಣಾಕ್ಕೆ ಹತ್ತಿಕೊಂಡು ಇರುವ ಕಾಲುವೆಗಳು ಸಹ ಒತ್ತುವರಿಯಾಗಿದ್ದು ಅವುಗಳ ತೆರವಿಗೆ ಸಹ ಮುಂದಾಗುವಂತೆ ಸೂಚಿಸಿದರು.
ಮುಜರಾಯಿ ಖಾತೆಯಲ್ಲಿ ಬಹಳ ವರ್ಷಗಳಿಂದ ಬಳಕೆಯಾಗದೇ ಉಳಿದಿರುವ ಅನುದಾನವನ್ನು ಮುಜರಾಯಿ ದೇವಸ್ಥಾನಗಳಿಗೆ ಬಿಡುಗಡೆ ಮಾಡುವಂತೆ ಮುಜರಾಯಿ ಸಚಿವರಿಗೆ ಮನವಿ ಮಾಡಿದ್ದು, ಕೆಲವು ಅಂಶಗಳ ಮಾಹಿತಿಯನ್ನು ಸಲ್ಲಿಸುವಂತೆ ಪತ್ರ ಬಂದಿದ್ದು, ತಕ್ಷಣ ಮಾಹಿತಿ ದೊರಕಿಸುವಂತೆ ತಿಳಿಸಿದರು.
ಈಗಾಗಲೇ ಬಹಳ ಗ್ರಾಮಗಳಿಗೆ ಸ್ಮಶಾನಕ್ಕೆ ಭೂಮಿ ಕಾಯ್ದಿರಿಸಲಾಗಿದ್ದು, ಇನ್ನು ಕೆಲವು ಗ್ರಾಮಗಳಲ್ಲಿ ಸ್ಮಶಾನ ಭೂಮಿಗಾಗಿ ಪ್ರಸ್ತಾವನೆ ಸಲ್ಲಿಸುವುದು ಬಾಕಿ ಇದೆ. ಸ್ಮಶಾನ ರಹಿತ ಗ್ರಾಮಗಳನ್ನು ಪಟ್ಟಿ ಮಾಡಿ ಪ್ರಸ್ತಾವನೆಗೆ ಸಿದ್ಧತೆ ಕೈಗೊಳ್ಳಬೇಕು. ಈಗಾಗಲೇ ಕಂದಾಯ ಗ್ರಾಮ, ಉಪ ಗ್ರಾಮಗಳಿಗೆ ಸಂಬಂಧಿಸಿದಂತೆ ಹಕ್ಕುಪತ್ರ ನೀಡಲು ಸರ್ವೆಯಾಗಿ ಫಲಾನುಭವಿಗಳಿಂದ ಅರ್ಜಿ ಸ್ವೀಕರಿಸಲಾಗುತ್ತಿದ್ದು, ಕೆಲ ಅರ್ಹರನ್ನು ಕೈ ಬಿಟ್ಟಿರುವ ಬಗ್ಗೆ ದೂರುಗಳಿವೆ. ಪರಿಶೀಲಿಸಿ, ಅರ್ಹರಿಗೆ ನ್ಯಾಯ ದೊರಕಿಸಿ ಎಂದು ಮಾನೆ ಸೂಚಿಸಿದರು.