Home ಜಿಲ್ಲೆ ಕಾನೂನು ಸೇವೆಗಳ ಸದುಪಯೋಗ ಪಡೆಯಿರಿ

ಕಾನೂನು ಸೇವೆಗಳ ಸದುಪಯೋಗ ಪಡೆಯಿರಿ

ಯಾದಗಿರಿ:ಜೂ.೨೧: ನ್ಯಾಯವನ್ನು ಜನಸಾಮಾನ್ಯರ ಮನೆಬಾಗಿಲಿಗೆ ತಲುಪಿಸುವ ಮಹತ್ವಾಕಾಂಕ್ಷಿ ಉದ್ದೇಶದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಖಾಯಂ ಜನತಾ ನ್ಯಾಯಾಲಯ (ಪರ್ಮನೆಂಟ್ ಲೋಕ ಅದಾಲತ್) ವ್ಯವಸ್ಥೆಯ ಕುರಿತು ಗ್ರಾಮೀಣ ಜನರಲ್ಲಿ ಕಾನೂನು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಯಾದಗಿರಿ ವತಿಯಿಂದ ವಡಗೇರಾ ತಾಲೂಕಿನ ಬಿಳ್ಹಾರ್ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಲಾಯಿತು.

ಬಿಳ್ಹಾರ್ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ನಾಗಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಶ್ರೀ ಪರಶುರಾಮ ಜಿ. ರಾಮನಹಳ್ಳಿ ಅವರು ಖಾಯಂ ಜನತಾ ನ್ಯಾಯಾಲಯದ ಕಾರ್ಯವೈಖರಿ, ಉದ್ದೇಶಗಳು, ಕಾನೂನು ವ್ಯಾಪ್ತಿ ಹಾಗೂ ಸಾರ್ವಜನಿಕರಿಗೆ ದೊರೆಯುವ ಅನುಕೂಲಗಳ ಕುರಿತು ಸವಿಸ್ತಾರ ಹಾಗೂ ಸಮಗ್ರ ಮಾಹಿತಿ ನೀಡಿದರು.

ಮಾತನಾಡಿದ ಅವರು, ಸಾರ್ವಜನಿಕ ಉಪಯುಕ್ತ ಸೇವೆಗಳಾದ ವಿದ್ಯುತ್, ನೀರು, ಸಾರಿಗೆ, ಅಂಚೆ ಸೇವೆ, ದೂರಸಂಪರ್ಕ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸಂಬAಧಿಸಿದ ವಿವಾದಗಳನ್ನು ಸಾಂಪ್ರದಾಯಿಕ ನ್ಯಾಯಾಲಯಗಳ ದೀರ್ಘಕಾಲೀನ ಹಾಗೂ ಸಂಕೀರ್ಣ ಪ್ರಕ್ರಿಯೆಗೆ ಒಳಪಡಿಸದೆ, ಸೌಹಾರ್ದಯುತ ಮಾತುಕತೆ ಮತ್ತು ಸಂಧಾನದ ಮೂಲಕ ತ್ವರಿತವಾಗಿ ಇತ್ಯರ್ಥಗೊಳಿಸುವ ವ್ಯವಸ್ಥೆಯೇ ಖಾಯಂ ಜನತಾ ನ್ಯಾಯಾಲಯವಾಗಿದೆ ಎಂದು ತಿಳಿಸಿದರು.

ನ್ಯಾಯಾಲಯಗಳಲ್ಲಿ ವರ್ಷಗಳ ಕಾಲ ಬಾಕಿ ಉಳಿಯುವ ಪ್ರಕರಣಗಳ ನಡುವೆಯೂ, ಜನಸಾಮಾನ್ಯರಿಗೆ ಕಡಿಮೆ ವೆಚ್ಚದಲ್ಲಿ, ಕಡಿಮೆ ಅವಧಿಯಲ್ಲಿ ಹಾಗೂ ಪರಿಣಾಮಕಾರಿಯಾಗಿ ನ್ಯಾಯ ದೊರಕಿಸಲು ಖಾಯಂ ಜನತಾ ನ್ಯಾಯಾಲಯ ಮಹತ್ತರ ಪಾತ್ರ ವಹಿಸುತ್ತಿದ್ದು, ಗ್ರಾಮೀಣ ಪ್ರದೇಶದ ಜನರು ಈ ವ್ಯವಸ್ಥೆಯ ಕುರಿತು ಹೆಚ್ಚಿನ ಅರಿವು ಹೊಂದುವುದು ಅತ್ಯವಶ್ಯಕ ಎಂದು ಅವರು ಅಭಿಪ್ರಾಯಪಟ್ಟರು.

ಅಧ್ಯಕ್ಷೀಯ ಭಾಷಣ ಮಾಡಿದ ಶ್ರೀ ನಾಗಪ್ಪ ಅವರು, ಕಾನೂನು ಸೇವೆಗಳು ಕೇವಲ ನಗರ ಪ್ರದೇಶದ ಜನರಿಗೆ ಮಾತ್ರ ಸೀಮಿತವಾಗದೆ ಗ್ರಾಮೀಣ ಭಾಗದ ಪ್ರತಿಯೊಬ್ಬ ನಾಗರಿಕರಿಗೂ ತಲುಪಬೇಕು ಎಂಬ ಉದ್ದೇಶದಿಂದ ಇಂತಹ ಜಾಗೃತಿ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗುತ್ತಿವೆ ಎಂದರು. ಕಾನೂನು ಸೇವೆಗಳ ಸದುಪಯೋಗ ಪಡೆದುಕೊಳ್ಳುವ ಮೂಲಕ ಸಾರ್ವಜನಿಕರು ತಮ್ಮ ಹಕ್ಕುಗಳನ್ನು ಸಂರಕ್ಷಿಸಿಕೊಳ್ಳಬೇಕು ಹಾಗೂ ಸಮಸ್ಯೆಗಳನ್ನು ಕಾನೂನುಬದ್ಧ ಮಾರ್ಗದಲ್ಲಿ ಪರಿಹರಿಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಸಾರ್ವಜನಿಕರು ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸಿಬ್ಬಂದಿ ಉಪಸ್ಥಿತರಿದ್ದು, ಖಾಯಂ ಜನತಾ ನ್ಯಾಯಾಲಯದ ಮಹತ್ವ ಮತ್ತು ಅದರ ಉಪಯುಕ್ತತೆಯ ಕುರಿತು ಮಾಹಿತಿ ಪಡೆದುಕೊಂಡರು.

ಗ್ರಾಮೀಣ ಜನತೆಗೆ ಕಾನೂನು ಜಾಗೃತಿ ಮೂಡಿಸುವ ಹಾಗೂ ನ್ಯಾಯದ ಪ್ರವೇಶವನ್ನು ಮತ್ತಷ್ಟು ಸುಲಭಗೊಳಿಸುವ ನಿಟ್ಟಿನಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮವು ಜನಮೆಚ್ಚುಗೆಗೆ ಪಾತ್ರವಾಯಿತು.