ಏಳನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಪ್ರಚಾರಾರ್ಥ ಗಮನ ಸೆಳೆದ ಆಟೋ ರ‍್ಯಾಲಿ

ಔರಾದ್ :ಫೆ.೩: ಪಟ್ಟಣದ ಗುರುಪಾದಪ್ಪ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ತಾಲ್ಲೂಕು ಏಳನೇ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಚಾರಾರ್ಥ ಜೈ ಕರ್ನಾಟಕ ಆಟೋ ಚಾಲಕರ ಸಂಘದ ವತಿಯಿಂದ ಆಟೋ ರ‍್ಯಾಲಿ ಗಮನ ಸೆಳೆಯಿತು.

ಪಟ್ಟಣದ ಕನ್ನಡಾಂಬೆ ವೃತ್ತದಲ್ಲಿ ಸೇರಿದ ಆಟೋ ಮಾಲೀಕರು ಸ್ವಯಂ ಪ್ರೇರಿತರಾಗಿ ಕನ್ನಡ ರತ್ನತ್ರಯರ ಭಾವಚಿತ್ರ ಆಟೋ ಮೇಲೆ ಅಳವಡಿಸಿ ಕನ್ನಡ ಬಾವುಟಗಳಿಂದ ಸಿಂಗರಿಸಿ ಪಟ್ಟಣದ ತುಂಬೆಲ್ಲಾ ರ‍್ಯಾಲಿ ನಡೆಸಿ ಕನ್ನಡ ಕನ್ನಡ ಬನ್ನಿ ನಮ್ಮ ಸಂಗಡ ಜೈ ಘೋಷಣೆ ಮೂಲಕ ಸಮ್ಮೇಳನಕ್ಕೆ ಆಗಮಿಸುವಂತೆ ಪ್ರಚಾರ ನಡೆಸಿದ್ದಾರೆ. ಪಟ್ಟಣದ ಕನ್ನಡಾಂಬೆ ವೃತ್ತದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಅವರು ಆಟೋ ರ‍್ಯಾಲಿಗೆ ಚಾಲನೆ ನೀಡಿದರು.

ಆಟೋ ರ‍್ಯಾಲಿ ಆಯೋಜಕರ ಆನಂದ ದ್ಯಾಡೆ ಅವರು ಮಾತನಾಡಿ ಜೈ ಕರ್ನಾಟಕ ಆಟೋ ಚಾಲಕರ ಸಂಘದ ವತಿಯಿಂದ ಇದೇ ಮೊದಲ ಬಾರಿಗೆ ಕನ್ನಡ ಬೃಹತ್ ರ‍್ಯಾಲಿ ನಡೆಸಿದ್ದು ಕನ್ನಡದ ಕಂಪು ಪಸರಿಸುವಂತೆ ಮಾಡಿದೆ, ಎಲ್ಲರೂ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗಿಯಾಗುವಂತೆ ತಿಳಿಸಿದ್ದಾರೆ.

ಈ ಸಂಧರ್ಭದಲ್ಲಿ ಹಿರಿಯರಾದ ವೈಜಿನಾಥ ಬುಟ್ಟೆ, ಶಿವರಾಜ ಅಲ್ಮಾಜೆ, ಜಗನ್ನಾಥ ಮೂಲಗೆ, ಅಶೋಕ ಶೆಂಬೆಳ್ಳಿ, ಅಮರಸ್ವಾಮಿ ಸ್ಥಾವರಮಠ, ಆಟೋ ಚಾಲಕರ ಸಂಘದ ಅಧ್ಯಕ್ಷ ಶಿವಕುಮಾರ ಸ್ವಾಮಿ, ಉತ್ತಮ ಮಾಂಜ್ರೇಕರ, ದಯಾನಂದ ಕೋಳಿ, ದತ್ತು ಡೊಂಬಾಳೆ, ಸದಾನಂದ ಸ್ವಾಮಿ, ಅಶೋಕ ರೆಡ್ಡಿ, ಪ್ರವೀಣ ಚವ್ಹಾಣ, ಯೋಹನ, ಕಾರ್ತಿಕ ಸ್ವಾಮಿ, ರಾಮಚಂದ್ರ ಕುಂಬಾರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.