Home ಜಿಲ್ಲೆ ಎನ್ ಪಿ ಎಸ್ ರದ್ದುಗೊಳಿಸಿ ಓಪಿಎಸ್ ಜಾರಿಗೊಳಿಸಲು ಸಂಘ ಬದ್ಧ; ರಾಜ್ಯಾಧ್ಯಕ್ಷರಿ ಷಡಕ್ಷರಿ

ಎನ್ ಪಿ ಎಸ್ ರದ್ದುಗೊಳಿಸಿ ಓಪಿಎಸ್ ಜಾರಿಗೊಳಿಸಲು ಸಂಘ ಬದ್ಧ; ರಾಜ್ಯಾಧ್ಯಕ್ಷರಿ ಷಡಕ್ಷರಿ

ಸಂಜೆವಾಣಿ ವಾರ್ತೆ,
ವಿಜಯಪುರ, ಜು. ೨೭ : ರಾಜ್ಯ ಸರ್ಕಾರಿ ನೌಕರರಿಗೆ ೨೦೦೬ ರಿಂದ ಜಾರಿಯಾದ ನೂತನ ಪಿಂಚಣಿ ಯೋಜನೆ (ಎನ್ ಪಿ ಎಸ್) ರದ್ದುಗೊಳಿಸಿ, ಹಳೆಯ ಪಿಂಚಣಿ ಯೋಜನೆಯನ್ನು ( ಓಪಿಎಸ್) ಸರ್ಕಾರದದಿಂದ ಜಾರಿಗೊಳಿಸಲು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬದ್ದವಾಗಿದೆ ಎಂದು ರಾಜ್ಯಾಧ್ಯಕ್ಷ ಸಿ.ಎಸ್ ಷಡಕ್ಷರಿ ಹೇಳಿದರು.
ನಗರದ ಕಿತ್ತೂರ ರಾಣಿ ಚನ್ನಮ್ಮ ಸಮುದಾಯ ಭವನದಲ್ಲಿ ಶನಿವಾರ ಸಂಜೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೆಂಗಳೂರು ವತಿಯಿಂದ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಸರ್ಕಾರಿ ನೌಕರರ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆಗೈದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಎನ್ಪಿಎಸ್ ರದ್ದು ಮಾಡಿ ಓಪಿಎಸ್ ಜಾರಿ ಮಾಡುವ ಭರವಸೆಯನ್ನು ಸರ್ಕಾರ ನೀಡಿದ್ದು, ನೌಕರರ ಹಿತಾಸಕ್ತಿಗಾಗಿ ಸಂಘ ನಿರಂತರವಾಗಿ ಕಾರ್ಯನಿರ್ವಹಿಸಲಿದೆ. ಶಿಕ್ಷಣವೇ ವ್ಯಕ್ತಿಯ ಬದುಕಿನ ಭದ್ರ ಬುನಾದಿ. ಜ್ಞಾನ, ಶಿಸ್ತು, ಸಂಸ್ಕಾರ ಹಾಗೂ ನಿರಂತರ ಪರಿಶ್ರಮದ ಮೂಲಕ ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಿ ಸಮಾಜ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ತಮ್ಮ ಅಮೂಲ್ಯ ಕೊಡುಗೆ ನೀಡಬೇಕು ಎಂದರು.
ಜಿಲ್ಲಾಧಿಕಾರಿ ಕೆ. ಆನಂದ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಪೋಷಕರಿಗೆ ಸಂತಸ ಹಾಗೂ ಹೆಮ್ಮೆ ತರುವ ಸಂಗತಿಯಾಗಿದೆ. ವಿದ್ಯಾರ್ಥಿಗಳು ತಂದೆ ತಾಯಿಯ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಉತ್ತಮ ಶಿಕ್ಷಣ ಪಡೆದು ಉನ್ನತ ಸಾಧನೆ ಮಾಡಬೇಕು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಪ್ರತಿಭಾ ಪುರಸ್ಕಾರ ನೀಡುತ್ತಿರುವ ಸರ್ಕಾರಿ ನೌಕರರ ಸಂಘದ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ ಅಭಿನವ ಸಿದ್ದಾರೂಢ ಮಹಾಸ್ವಾಮೀಜಿ ಮಾತನಾಡಿ ಮಕ್ಕಳಿಗೆ ಆಸ್ತಿ ಮಾಡಬೇಡಿ, ಮಕ್ಕಳನ್ನೆ ಅಸ್ತಿ ಮಾಡಿ ಹೇಳಿದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಗೂ ರಾಜ್ಯ ಹಿರಿಯ ಉಪಾಧ್ಯಕ್ಷ ಸುರೇಶ ಶೇಡಶ್ಯಾಳ ಮಾತನಾಡಿ ಸರ್ಕಾರಿ ನೌಕರರ ಮಕ್ಕಳ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸುತ್ತಿರುವುದು ಸಂತಸದ ಸಂಗತಿಯಾಗಿದೆ. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಇನ್ನಷ್ಟು ಸಾಧನೆ ಮಾಡುವ ಉತ್ಸಾಹ ಹಾಗೂ ಆತ್ಮವಿಶ್ವಾಸವನ್ನು ಮೂಡಿಸುತ್ತವೆ ಎಂದರು.
ಖ್ಯಾತ ವಾಗ್ಮಿ ಚಟ್ನಹಳ್ಳಿ ಮಹೇಶ್ ಮಾತನಾಡಿ, ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಉಪನ್ಯಾಸ ನೀಡಿದರು. ಬಾಗಲಕೋಟೆ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಹಾಗೂ ರಾಜ್ಯ ಸಂಘದ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ ಅವರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಎಸ್. ಬಸವರಾಜ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸಂಘದ ಹಿರಿಯ ಉಪಾಧ್ಯಕ್ಷ ಮೋಹನ್ ಕುಮಾರ್, ಸೋಮಶೇಖರಯ್ಯ, ರಾಜ್ಯ ಉಪಾಧ್ಯಕ್ಷರಾದ ಸಂಜೀವ್ ಸತ್ಯ ರೆಡ್ಡಿ, ಶಿವಾನಂದ ಮಂಗನವರ, ವಿಜಯಕುಮಾರ್ ಹತ್ತಿ, ಜಿಲ್ಲಾ ಕಾರ್ಯದರ್ಶಿ ಶಿವರಾಜ್ ಬಿರಾದಾರ್, ಖಜಾಂಚಿ ಜುಬೇರ. ಎಸ್. ಕೆರೂರ್, ಕಾರ್ಯಾಧ್ಯಕ್ಷ ಬಿ. ಟಿ. ಗೊಂಗಡಿ, ಗೌರವಾಧ್ಯಕ್ಷ ವಿಶ್ವನಾಥ್ ಬೆಳ್ಳನ್ನವರ್, ಹಿರಿಯ ಮುಖಂಡರಾದ ರಾಜಶೇಖರ್ ದೈವಾಡಿ, ಗಂಗಾಧರ ದೇವೂರ್, ವಿಠ್ಠಲ್ ವಾಲಿಕಾರ್, ಗೋಪಾಲ್ ಎನ್. ನಿಲ್ನಾಯಕ್, ಅಜ್ಜನವರ್ ಸುರೇಶ್, ಎಸ್. ಇಂಜಿನಿಗೇರಿ ಸೇರಿದಂತೆ ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳು, ತಾಲೂಕು ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಪೋಷಕರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ರಾಜಶೇಖರ್ ದೈವಾಡಿ ನಿರೂಪಿಸಿದರು. ಮಲ್ಲಿಕಾರ್ಜುನ ಬಳ್ಳಾರಿ ಸ್ವಾಗತಿಸಿದರು. ವಂದನಾರ್ಪನೆಯನ್ನು ಶಿವರಾಜ ಬಿರಾದಾರ ನೆರವೇರಿಸಿದರು.