೫೦ ಸಾವಿರ ತುರ್ತು ಪರಿಹಾರ ಘೋಷಣೆಗೆ ಆಶೋಕ್ ಆಗ್ರಹ

ಬೆಂಗಳೂರು, ಸೆ. ೩೦- ಕಲ್ಯಾಣ ಕರ್ನಾಟಕದ ಪ್ರವಾಹ ಸಂತ್ರಸ್ತ ಕುಟುಂಬಗಳಿಗೆ ರಾಜ್ಯ ಸರ್ಕಾರ ಕೂಡಲೇ ತಲಾ ೫೦ ಸಾವಿರ ರೂ. ತುರ್ತು ಪರಿಹಾರವನ್ನು ಘೋಷಣೆ ಮಾಡಬೇಕು ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಒತ್ತಾಯಿಸಿದ್ದಾರೆ.


ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಅಶೋಕ್ ಅವರು, ಕಲ್ಯಾಣ ಕರ್ನಾಟಕದ ಭೀಮಾ ನದಿ ತೀರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಅಲ್ಲಿನ ಹಳ್ಳಿಗಳು ಜಲಾವೃತಗೊಂಡಿವೆ. ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಪ್ರತಿ ಕುಟುಂಬಕ್ಕೆ ೫೦ ಸಾವಿರ ರೂ. ತುರ್ತು ಪರಿಹಾರ ಘೋಷಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಆಗ್ರಹಿಸಿದ್ದಾರೆ.


ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನಿಮ್ಮ ವೈಮಾನಿಕ ಸಮೀಕ್ಷೆ ಮತ್ತೊಂದು ಕಾಟಾಚಾರದ ಸಮೀಕ್ಷೆಯಾಗದೆ ವಿಮಾನ ಟೇಕ್ ಆಫ್ ಆಗುವ ಮುನ್ನ ಪರಿಹಾರ ಕಾರ್ಯ ಟೇಕ್ ಆಫ್ ಆಗಲಿ ಎಂದು ಅವರು ಹೇಳಿದ್ದಾರೆ.


ಕಲ್ಯಾಣ ಕರ್ನಾಟಕದ ಪ್ರವಾಹ ಪರಿಸ್ಥಿತಿಯ ಬಗ್ಗೆ ಈಗಲಾದರೂ ನೆನಪಾಯಿತಲ್ಲಾ, ಅದೇ ದೊಡ್ಡ ಪುಣ್ಯ. ಆದರೆ ಪ್ರವಾಹದಿಂದ ತತ್ತರಿಸಿರುವ ಕಲ್ಯಾಣ ಕರ್ನಾಟಕದ ಜನರಿಗೆ ಬೇಕಾಗಿರುವುದು ನಿಮ್ಮ ವೈಮಾನಿಕ ಸಮೀಕ್ಷೆಯ ಫೋಟೋ ಶೂಟಲ್ಲ, ತುರ್ತು ಪರಿಹಾರ. ಅಲ್ಲಿನ ಜನ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ.


ನಿಮ್ಮ ಕಲ್ಯಾಣ ಕರ್ನಾಟಕದ ಭೇಟಿ ಸಂದರ್ಭದಲ್ಲೇ ಪ್ರವಾಹ ಸಂತ್ರಸ್ತರಿಗೆ ಸ್ಥಳದಲ್ಲೇ ಚೆಕ್ ವಿತರಣೆಯಾಗಲಿ. ಈ ಹಿಂದೆ ನಾನು ಕಂದಾಯ ಸಚಿವನಾಗಿದ್ದಾಗ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರು ಪ್ರವಾಹ ಸಂತ್ರಸ್ತರಿಗೆ ಸ್ಥಳದಲ್ಲೇ ಚೆಕ್ ವಿತರಣೆ ಮಾಡಿದ್ದರು. ಕಾಂಗ್ರೆಸ್ ಸರ್ಕಾರವೂ ಅದೇ ರೀತಿ ಸ್ಥಳದಲ್ಲೇ ಚೆಕ್ ವಿತರಿಸಬೇಕು ಎಂದು ಒತ್ತಾಯಿಸಿದರು.


ನೆರೆ ನಿಂತ ಮೇಲೆ ಜಿಲ್ಲಾ ಉಸ್ತುವಾರಿ ಸಚಿವರುಗಳು, ಶಾಸಕರುಗಳು ಹಾಗೂ ಅಧಿಕಾರಿಗಳ ತಂಡ ಪ್ರತಿ ಗ್ರಾಮಕ್ಕೆ ಭೇಟಿ ನೀಡಿ ಬೆಳೆ, ಆಸ್ತಿ, ಪಾಸ್ತಿ, ಜಾನುವಾರು ಸೇರಿದಂತೆ ಸಮಗ್ರ ಸಮೀಕ್ಷೆ ನಡೆಸಬೇಕು. ಸಾಂಕ್ರಾಮಿಕ ರೋಗಗಳ ತಡೆಗೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.


ಪರಿಹಾರ ವಿತರಣೆಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಬೇಕು. ನೆರೆ, ಬರ ಉಂಟಾದಾಗ ಪರಿಹಾರ ವಿತರಣೆ ಸಂದರ್ಭದಲ್ಲಿ ಹಲವು ಸಂತ್ರಸ್ತರು ಪರಿಹಾರಕ್ಕಾಗಿ ಜಿಲ್ಲಾ ಕಚೇರಿಗಳಿಗೆ ವರ್ಷಗಟ್ಟಲೇ ಅಲೆದಾಡಿದ್ದಾರೆ. ಹಾಗಾಗಿ ಯಾರೂ ಪರಿಹಾರದಿಂದ ವಂಚಿತರಾಗದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.


ಪರಿಹಾರ ವಿತರಣೆ ಸಂದರ್ಭದಲ್ಲಿ ಯಾವುದೇ ದುರುಪಯೋಗ, ಭ್ರಷ್ಟಾಚಾರ ಆಗದಂತೆ ಎಚ್ಚರ ವಹಿಸಿ ಎಂದು ಅವರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.


ಸಾಫ್ಟ್‌ವೇರ್ ಲೋಪ, ಸರ್ವರ್ ಡೌನ್ ಎಂಬ ಕುಂಟು ನೆಪಗಳನ್ನು ಹೇಳುವುದನ್ನು ಬಿಟ್ಟು, ಕಾಳಜಿ ಕೇಂದ್ರಗಳಲ್ಲಿರುವ ಪ್ರತಿ ಸಂತ್ರಸ್ತ ಕುಟುಂಬಗಳಿಗೆ ಕೂಡಲೇ ತುರ್ತಾಗಿ ೫೦ ಸಾವಿರ ರೂ. ಪರಿಹಾರ ಬಿಡುಗಡೆ ಮಾಡುವಂತೆಯೂ ಅವರು ಒತ್ತಾಯಿಸಿದ್ದಾರೆ.


ಪರಿಹಾರ ಹಣ ಬಿಡುಗಡೆ ವಿಳಂಬ ಮಾಡಬೇಡಿ, ವಿಳಂಬ ಮಾಡಿ ನೆರೆ ಸಂತ್ರಸ್ತರು ದೀಪಾವಳಿಯನ್ನು ಕತ್ತಲಲ್ಲಿ ಕಳೆಯುವಂತೆ ಮಾಡಬೇಡಿ ಎಂದು ಅವರು ಸರ್ಕಾರಕ್ಕೆ ಕಿವಿಮಾತು ಹೇಳಿದ್ದಾರೆ.


ಕಲ್ಯಾಣ ಕರ್ನಾಟಕದ ಪ್ರವಾಹ ಸಂತ್ರಸ್ತರ ನೆರವಿಗೆ ೧೦ ಸಾವಿರ ಕೋಟಿ ರೂಪಾಯಿಗಳ ವಿಶೇಷ ಆರ್ಥಿಕ ಪ್ಯಾಕೇಜ್‌ನ್ನು ಘೋಷಣೆ ಮಾಡಿ ಆ ಭಾಗದ ಜನರ ನೋವಿಗೆ ಸ್ಪಂದಿಸುವ ಕೆಲಸ ಮಾಡಿ ಎಂದು ಅವರು ಆಗ್ರಹಿಸಿದ್ದಾರೆ.