
ಚಿಕ್ಕಬಳ್ಳಾಪುರ, ಅ. ೨೨: ನವರಾತ್ರಿ ಮುಗಿದು ದಶಮಿ ದಿನವಾದ ನಿನ್ನೆ ಬುಧವಾರ, ತಾಲೂಕು ದಂಡಾಧಿಕಾರಿ ತಹಸಿಲ್ದಾರ್ ರಶ್ಮಿ ಅವರು ಪ್ರತಿ ವರ್ಷದ ಸಂಪ್ರದಾಯದಂತೆ ನಗರದ ವಾಪಸಂದ್ರ ಬಡಾವಣೆಯ ಶ್ರೀ ರಂಗನಾಥಸ್ವಾಮಿ ದೇವಾಲಯದ ಹಿಂಭಾಗದ ಬನ್ನಿ ಮರಕ್ಕೆ ಅಂಬು ಹೊಡೆಯುವ ಮೂಲಕ ವಿಜಯದಶಮಿ ಆಚರಿಸಿದರು.
ನಗರದ ವಾಪಸಂದ್ರ ಬಡಾವಣೆಯ ಶ್ರೀ ರಂಗನಾಥಸ್ವಾಮಿ ದೇವಾಲಯಕ್ಕೂ ಅದರ ಹಿಂಭಾಗದ ಬನ್ನಿವೃಕ್ಷಕ್ಕೂ ನೂರಾರು ವರ್ಷಗಳ ಇತಿಹಾಸವಿದ್ದು ಸ್ವಾತಂತ್ರ್ಯ ನಂತರ ತಹಸೀಲ್ದಾರ್ ಅಧಿಕಾರಿಗಳು ನವರಾತ್ರಿ ಆದ ನಂತರ ವಿಜಯದಶಮಿ ದಿನದಂದು ನಾಡಿನ ಸುಭಿಕ್ಷತೆಗಾಗಿ ಅಂಬನ್ನು ಹೊಡೆದು ಬನ್ನಿವೃಕ್ಷದ ಎಲೆಗಳನ್ನು ಪ್ರಸಾದ ರೂಪದಲ್ಲಿ ಸ್ವೀಕರಿಸುವುದು ಪ್ರತೀ ವರ್ಷದ ವಾಡಿಕೆ ಆಗಿದ್ದು, ಇದೇ ರೀತಿ ಈ ವರ್ಷವೂ ತಹಸೀಲ್ದಾರ್ ರಶ್ಮಿ ಅವರು ಸಂಪ್ರದಾಯಬದ್ಧ ಮೈಸೂರು ಪೇಟ, ಕೋಟು ಧರಿಸಿ, ಹಣೆಗೆ ಕೇಸರಿ ಇಟ್ಟು, ವಿಶೇಷವಾಗಿ ಅಲಂಕರಿಸಿದ ಬಿಲ್ಲು ಮತ್ತು ಬಾಣವನ್ನು ಧರಿಸಿ ಅಂಬು ಹೊಡೆದರು.
ಈ ಸಂಪ್ರದಾಯಿಕ ಆಚರಣೆ ಮುಗಿದ ನಂತರ, ಅಲ್ಲಿದ್ದ ಭಕ್ತಾದಿಗಳು ಬನ್ನಿವೃಕ್ಷದ ಎಲೆಗಳಿಗಾಗಿ ಮುಂದಾ-ಮುಂದು ಹೇಳಿ ಮುಗಿಬಿದ್ದು ಸ್ವೀಕರಿಸಿದ್ದು ಕಂಡುಬಂದಿತು.
ತಹಸೀಲ್ದಾರ್ ರಶ್ಮಿ ಪ್ರತಿಕ್ರಿಯೆ
“ನವರಾತ್ರಿ ಮತ್ತು ವಿಜಯದಶಮಿ ಆಚರಣೆ ಭಾರತೀಯ ಸಂಸ್ಕೃತಿಯಲ್ಲಿ ಹೆಚ್ಚಿನ ಮಹತ್ವ ಪಡೆದಿದ್ದು, ಈ ಆಚರಣೆಯಿಂದ ಸಮಾಜಕ್ಕೆ ಸುಖ, ಶಾಂತಿ, ಸಮೃದ್ಧಿ ಲಭಿಸುತ್ತದೆ ಎಂಬ ನಂಬಿಕೆಯೊಂದಿಗೆ ಹಿರಿಯರು ಆಚರಿಸಿಕೊಂಡು ಬಂದಿದ್ದು, ಈಗಲೂ ಈ ಆಚಾರವನ್ನು ಮುಂದುವರಿಸಿದ್ದೇವೆ. ಈ ವರ್ಷ ರಾಜ್ಯದಲ್ಲಿ ಉತ್ತಮ ಮಳೆ ಬಿದ್ದು, ಬೆಳೆ ಒಳ್ಳೆಯದಾಗಿ ಜನತೆಗೆ ಸುಖ ಸಂತೃಪ್ತಿ ದೊರೆಯಲಿ ಎಂದು ಈ ವೇಳೆ ನಾನು ಶುಭ ಹಾರೈಸುತ್ತೇನೆ,” ಎಂದು ತಾವು ಅಭಿಪ್ರಾಯ ವ್ಯಕ್ತಪಡಿಸಿದರು.






















