Home ಜಿಲ್ಲೆ ಕಲಬುರಗಿ ಆಳಂದ ಬಸ್ ನಿಲ್ದಾಣ ಕಾಮಗಾರಿ ಸಕಾಲಕ್ಕೆ ಪೂರ್ಣಗೊಳಿಸಲು ಅರುಣ್ ಕುಮಾರ್ ಪಾಟೀಲ್ ಸೂಚನೆ

ಆಳಂದ ಬಸ್ ನಿಲ್ದಾಣ ಕಾಮಗಾರಿ ಸಕಾಲಕ್ಕೆ ಪೂರ್ಣಗೊಳಿಸಲು ಅರುಣ್ ಕುಮಾರ್ ಪಾಟೀಲ್ ಸೂಚನೆ

ಆಳಂದ:ಫೆ.21: ಕೆಕೆಆರ್ಡಿಬಿ ಅನುದಾನದ ಐದು ಕೋಟಿ ರೂಪಾಯಿ ವೆಚ್ಚದಲ್ಲಿ ಆರಂಭಗೊಂಡಿರುವ ಆಳಂದ ಪಟ್ಟಣದ ಕೇಂದ್ರ ಬಸ್ ನಿಲ್ದಾಣದ ನೂತನ ಕಟ್ಟಡ ಕಾಮಗಾರಿಯನ್ನು ನಿಗಮದ ಅಧ್ಯಕ್ಷ ಅರುಣ್ ಕುಮಾರ್ ಪಾಟೀಲ್ ಅವರು ಸ್ಥಳಕ್ಕೆ ಭೇಟಿ ನೀಡಿ ಗುರುವಾರ ಪರಿಶೀಲಿಸಿದರು.
ಬಸ್ ನಿಲ್ದಾಣ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಉಂಟಾಗಿರುವ ಅವ್ಯವಸ್ಥೆ, ಪ್ರಯಾಣಿಕರ ಅಸೌಕರ್ಯ ಮತ್ತು ತಾತ್ಕಾಲಿಕ ಬಸ್ ನಿಲ್ದಾಣದ ಕೊರತೆಗಳನ್ನು ಕಣ್ಣಾರೆ ಕಂಡು, ಕೂಡಲೇ ಸರಿಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕಾಮಗಾರಿ ಪೂರ್ಣಗೊಳ್ಳುವವರೆಗೆ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗದಂತೆ ತಾತ್ಕಾಲಿಕ ಬಸ್ ನಿಲ್ದಾಣ ವ್ಯವಸ್ಥೆಯನ್ನು ಸಮರ್ಪಕವಾಗಿ ರೂಪಿಸಬೇಕು. ವಿಶೇಷವಾಗಿ, ಪ್ರಯಾಣಿಕರು ನಿಲ್ಲುವ ಶೆಡ್‍ನ್ನು ವಿಸ್ತರಿಸಿ, ಮಳೆ-ಬಿಸಿಲಿನಿಂದ ರಕ್ಷಣೆ ದೊರೆಯುವಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಅವರು ಸೂಚಿಸಿದರು.
ಅಲ್ಲದೆ, ಕಾಮಗಾರಿ ಸ್ಥಳದಲ್ಲಿ ಬಸ್‍ಗಳ ನಿಲುಗಡೆ ಹಾಗೂ ಪ್ರಯಾಣಿಕರ ಜನಜಂಗುಳಿಯಿಂದ ಉಂಟಾಗುತ್ತಿರುವ ಗೊಂದಲವನ್ನು ತಕ್ಷಣವೇ ನಿಯಂತ್ರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬಸ್ ನಿಲ್ದಾಣ ವಿಸ್ತರಣೆಗೆ ಅಗತ್ಯವಾಗಿರುವ ಎಪಿಎಂಸಿಯಿಂದ ಮಾತುಕತೆ ಹಂತದಲ್ಲಿರುವ 20 ಗುಂಟೆ ಜಮೀನನ್ನು ಸರ್ಕಾರದ ಗಮನಕ್ಕೆ ತಂದು, ಶೀಘ್ರದಲ್ಲೇ ಪಡೆದುಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು. ಹಳೆಯ ಬಸ್ ನಿಲ್ದಾಣ ಕಟ್ಟಡವನ್ನು ತೆರವುಗೊಳಿಸಿ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಚುರುಕಾಗಿ ನಡೆಯಬೇಕು, ಈ ಅವಧಿಯಲ್ಲಿ ಪ್ರಯಾಣಿಕರ ಮೂಲ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.
ಈ ವೇಳೆ ಅವರು ಆಳಂದ ಬಸ್ ಡಿಪೆÇೀ ಘಟಕಕ್ಕೂ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಗಳ ಸಮಸ್ಯೆಗಳು ಮತ್ತು ಬೇಡಿಕೆಗಳನ್ನು ಆಲಿಸಿದರು. ಘಟಕದ ಪಾಕಿರ್ಂಗ್ ಪ್ರದೇಶದಲ್ಲಿ ಸಿಸಿ (ಸಿಮೆಂಟ್ ಕಾಂಕ್ರೀಟ್) ನಿರ್ಮಾಣ, ಬಸ್‍ಗಳ ದುರಸ್ತಿಗೆ ನವೀನ ಯಂತ್ರೋಪಕರಣಗಳ ಒದಗಿಕೆ ಸೇರಿದಂತೆ ಸಿಬ್ಬಂದಿಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದಾಗಿ ಭರವಸೆ ನೀಡಿದರು. ಅಲ್ಲದೆ, ದೀರ್ಘಕಾಲದಿಂದ ಸ್ಥಗಿತಗೊಂಡಿರುವ ಕೆಲವು ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಸೂಚಿಸಿದರು.
ಒಟ್ಟಾರೆ, ಬಸ್ ನಿಲ್ದಾಣ ಕಾಮಗಾರಿ ಸ್ಥಳ ಹಾಗೂ ಡಿಪೆÇೀ ಘಟಕದಲ್ಲಿ ಜನರ ಮತ್ತು ಸಿಬ್ಬಂದಿಗಳ ಸಮಸ್ಯೆಗಳನ್ನು ನೇರವಾಗಿ ಪರಿಶೀಲಿಸಿದ ಅರುಣ್ ಕುಮಾರ್ ಪಾಟೀಲ್ ಅವರು, ಅವ್ಯವಸ್ಥೆ ನಿವಾರಣೆ, ಮೂಲ ಸೌಕರ್ಯಗಳ ವೃದ್ಧಿ ಮತ್ತು ಸೇವಾ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿ, ಶೀಘ್ರ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.