ಕಲಾವಿದರ ಬದುಕಿಗೆ ಭದ್ರತೆ ಗೌರವಯುತ ಜೀವನ ಅಗತ್ಯ

ರಬಕವಿ,ಜ12: ಕಲಾವಿದರ ಬದುಕಿಗೆ ಭದ್ರತೆ ಅಗತ್ಯ ಆದ್ದರಿಂದ ಕಲಾವಿದರ ಆರ್ಥಿಕ,ಸಾಮಾಜಿಕ ಹಾಗೂ ಸಾಂಸ್ಕೃತಿಕ ಸ್ಥಿತಿಗತಿಯ ಕುರಿತು ಸರ್ಕಾರ ಮತ್ತು ಸಮಾಜ ಗಂಭೀರವಾಗಿ ಚಿಂತಿಸಬೇಕೆಂದು ಸಮ್ಮೇಳನದ ಸರ್ವಾಧ್ಯಕ್ಷ ಮಲ್ಲಪ್ಪ ಗಣಿ ಹೇಳಿದರು.

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದ ಶ್ರೀ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಜರುಗಿದ ಜಿಲ್ಲಾಮಟ್ಟದ ಕಲಾವಿದರ ಪ್ರಥಮ ಸಮ್ಮೇಳನದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಕಲೆ ಕೇವಲ ಮನರಂಜನೆಯ ಸಾಧನವಲ್ಲ,ಅದು ಸಮಾಜದ ಸಂಸ್ಕೃತಿ,ಪರಂಪರೆ ಮತ್ತು ಗುರುತಿನ ಜೀವಾಳವಾಗಿದ್ದು,ಕಲೆ ಉಳಿಯಬೇಕಾದರೆ ಕಲಾವಿದರ ಬದುಕು ಭದ್ರವಾಗಿರಬೇಕು, ಪ್ರಸ್ತುತ ಕಲಾವಿದರಿಗೆ ನೀಡಲಾಗುತ್ತಿರುವ ಮಾಶಾಸನ ಮೊತ್ತ ಅತ್ಯಂತ ಅಲ್ಪವಾಗಿದ್ದು, ದಿನನಿತ್ಯದ ಅಗತ್ಯಗಳನ್ನು ಪೂರೈಸಲೂ ಸಾಲದಾಗಿದೆ,ಆದ್ದರಿಂದ ಕಲಾವಿದರಿಗೆ ನೀಡುವ ಮಾಶಾಸನವನ್ನು ಕನಿಷ್ಠ 2500 ರಿಂದ 5000 ಕ್ಕೆ ಹೆಚ್ಚಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು,ಜೀವನ ಪೂರ್ತಿ ಕಲೆಗಾಗಿ ಶ್ರಮಿಸಿದ ಹಿರಿಯ ಕಲಾವಿದರು ವೃದ್ಯಾಪ್ಯದಲ್ಲಿ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ ಆದ್ದರಿಂದ ಈಗಿರುವ ಮಾಶಾಸನ ವಯೋಮಿತಿ ಸಡಿಲಿಕೆ ಮಾಡುವ ಮೂಲಕ ಕಲಾವಿದರಿಗೆ ನೆರವಾಗಬೇಕು,ಬಡ ಹಾಗೂ ನಿರ್ಗತಿಕ ಕಲಾವಿದರಿಗೆ ವಸತಿ ಯೋಜನೆ ಜಾರಿಗೊಳಿಸಬೇಕು, ಮತ್ತು ಕಲಾವಿದರ ಮಕ್ಕಳಿಗೆ ಶಿಕ್ಷಣ ಹಾಗೂ ನೌಕರಿಯಲ್ಲಿ ಮೀಸಲಾತಿ ನೀಡಬೇಕು,ಇದರಿಂದ ಕಲಾವಿದರ ಕುಟುಂಬಗಳು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸದೃಡವಾಗಲು ಸಾಧ್ಯವಾಗುತ್ತದೆ,ಕಲೆಯ ಉಳಿವಿಗಾಗಿ ಕಲಾವಿದರೆಲ್ಲರೂ ಒಂದಾಗಿ ಸಂಘಟಿತರಾಗಿ ಶ್ರಮಿಸಬೇಕು, ಕಲೆ ಹಾಗೂ ಕಲಾವಿದರು ನಮ್ಮ ಸಂಸ್ಕೃತಿಯ ಉಸಿರಾಗಿದ್ದು,ಜಾನಪದ ಕಲೆಯ ವಿವಿಧ ರೂಪಗಳು ಗ್ರಾಮೀಣ ಬದುಕಿನ ಭಾಗವಾಗಿದೆ, ಇಂತಹ ಕಲಾ ರೂಪಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಕೇವಲ ಕಲಾವಿದರದಷ್ಟೆ ಅಲ್ಲ ಸಮಾಜದ ಪ್ರತಿಯೊಬ್ಬರ ಮೇಲಿದೆ,ಕಲೆ ಹಾಗೂ ಕಲಾವಿದರು ಬೆಳೆದರೆ ಮಾತ್ರ ಸಮಾಜ ಸಂತಸ ಸಂಭ್ರಮದಿಂದ ಇರಲು ಸಾಧ್ಯವೆಂದರು.

ಈ ಸಂದರ್ಭದಲ್ಲಿ ಜಿಲ್ಲೆಯ ಸಾಧನೆಗೈದ ಸ್ಮರಣೀಯ ಕಲಾಧಾರೆಗಳಾದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಇಬ್ರಾಹಿಂ ಸುತಾರ,ತಾಳ ಗಾರುಡಿಗ ಸದಪ್ಪ ಕಂಪು ಸೇರಿದಂತೆ ಅನೇಕ ಕಲಾ ಸಾಧಕರನ್ನು ಸ್ಮರಿಸಲಾಯಿತು.ಸುಮಾರು 30 ಕ್ಕೂ ಅಧಿಕ ಕಲಾ ತಂಡಗಳು 500 ಕ್ಕೂ ಅಧಿಕ ಕಲಾವಿದರು ಒಂದೇ ವೇದಿಕೆಯಲ್ಲಿ ಭಾಗವಹಿಸುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಜಿಲ್ಲೆಯ ವಿವಿಧ ಕ್ಷೇತ್ರಗಳ 50 ಕ್ಕೂ ಅಧಿಕ ಸಾಧಕರಿಗೆ ಕಲಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶ್ರೀ ಪ್ರಭು ಮಹಾಸ್ವಾಮಿಗಳು ಚಿಮ್ಮಡ, ಜಮಖಂಡಿ ಶಾಸಕ ಜಗದೀಶ ಗುಡಗುಂಟಿ, ಶ್ರೀಮತಿ ಕವಿತಾ ಕೊಣ್ಣೂರ, ಶ್ರೀಮತಿ ವಿದ್ಯಾ ವಿದ್ಯಾಧರ ಸವದಿ, ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ತಾಲೂಕಾಧ್ಯಕ್ಷ ಮ ಕೃ ಮೇಗಾಡಿ, ಗಂಗಾಧರ ಮೋಪಗಾರ, ಸಿದ್ದು ದಿವಾಣ, ಗ್ರಾಪಂ ಅಧ್ಯಕ್ಷೆ ರೇಖಾ ಕಾಂತಿ, ಉಪಾಧ್ಯಕ್ಷ ಮುತ್ತವ್ವ ಭಜಂತ್ರಿ, ಗುರು ಮರಡಿಮಠ, ಆನಂದ ಕಂಪು, ಹಣಮಂತ ಸವದಿ, ದಾನಪ್ಪ ಆಸಂಗಿ, ಎಂ ಆರ್ ವಾಲಿ, ದ್ರಾಕ್ಷಾಯಿಣಿ ಮಂಡಿ, ಕಲಾವಿದರಾದ ಮಲ್ಲಪ್ಪ ಹೂಗಾರ, ಜೀವಪ್ಪ ಬಡಿಗೇರ, ಸಿದ್ದಪ್ಪ ಕಂಚು, ಮಾರುತಿ ಭಜಂತ್ರಿ, ಶ್ರೀಶೈಲ ಪಟ್ಟಣಶೆಟ್ಟಿ, ಶೋಭಾ ವಾರದ, ಎಂ ಎಸ್ ತುಪ್ಪದ, ಶಿಲ್ಪಾ ಕುಲಹಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.