
ಕಲಬುರಗಿ: ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 371ಜೆ ವರದಾನವಾಗಿದ್ದು, ಈ ಭಾಗದ ಸಮಗ್ರ ಅಭಿವೃದ್ಧಿಯ ಕನಸು ಸಾಕಾರಗೊಳ್ಳಲು ವೈಜನಾಥ ಪಾಟೀಲ್ ಹೋರಾಟದ ಕಿಚ್ಚು, ಪ್ರಿಯಾಂಕ ಖರ್ಗೆ ಕೈಚಳಕ ಮತ್ತು ಕೇಂದ್ರ ಮಂತ್ರಿಯಾಗಿ ಮಲ್ಲಿಕಾರ್ಜುನ ಖರ್ಗೆ ಅವರ ರಾಜಕೀಯ ಬದ್ದತೆ ಕಾರಣವಾಗಿದೆ ಎಂದು ಸರ್ಕಾರಿ ಸ್ವಾಯತ್ತ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಮಲ್ಲಿಕಾರ್ಜುನ ಶೆಟ್ಟಿ ಹೇಳಿದರು.
ನಗರದ ಜೇವರ್ಗಿ ಕಾಲೋನಿಯಲ್ಲಿರುವ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಐಕ್ಯೂಎಸಿ ಮತ್ತು ವಿವಿಧ ವಿಭಾಗಗಳ ಸಹಯೋಗದಲ್ಲಿ ಆಯೋಜಿಸಿದ ‘ಕಲಂ 371ಜೆ ಐತಿಹಾಸಿಕ ವಿಶ್ಲೇಷಣೆ’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಸಿಸಿಗೆ ನೀರೆರೆದು ಉದ್ಘಾಟಿಸಿ ಮಾತನಾಡಿ ಕಲ್ಯಾಣ ಕರ್ನಾಟಕ ಪ್ರದೇಶಗಳ ಅಭಿವೃದ್ಧಿಗಾಗಿ ಶಿಕ್ಷಣ, ಉದ್ಯೋಗ ಮತ್ತು ಮೂಲಭೂತ ಸೌಕರ್ಯಗಳು ಒದಗಿ ಬಂದಿವೆ. ಯುವಕರು, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ನಾಗರೀಕ ಸಮುದಾಯ ವಿಶೇಷ ಸೌಲಭ್ಯಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಮೋರಗೆ ಪ್ರಕಾಶ್ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿನಿಯರು 371ಜೆ ಅಡಿಯಲ್ಲಿ ಶೈಕ್ಷಣಿಕ ಸೌಲಭ್ಯಗಳನ್ನು ಪಡೆದುಕೊಂಡು ಉನ್ನತ ಹುದ್ದೆಗಳನ್ನು ಪಡೆಯಲು ಸೂಕ್ತ ಅರ್ಹತೆಯೊಂದಿಗೆ ಕ್ರಿಯಾಶೀಲರಾಗಬೇಕು ಎಂದರು.
ಐಕ್ಯೂಎಸಿ ಸಂಚಾಲಕ ಡಾ. ಶರಣಬಸಪ್ಪ ಚಿಕ್ಕಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಸುನಂದಾ, ಡಾ. ನಿಯಾಝ ಬೇಗಂ, ಡಾ. ಅನಂತಾ, ಡಾ. ಪ್ರಕಾಶ್ ಬಡಿಗೇರ್, ಡಾ. ಸುರೇಶ್ ಬಡಿಗೇರ್, ಡಾ. ಸಂತೋಷ್ ಹೂಗಾರ, ಡಾ. ಅಣವೀರಪ್ಪ, ಡಾ. ಅಶೋಕ ಕುಮಾರ ಉಪಸ್ಥಿತಿರಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು, ಅತಿಥಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಡಾ. ಜೋತಿ ಕೆ. ಎಸ್. ಅತಿಥಿ ಪರಿಚಯಿಸಿದರು. ಕು. ಕವಿತಾ ಪ್ರಾರ್ಥಿಸಿದರು. ಡಾ. ಶೋಭಾದೇವಿ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಐಕ್ಯೂಎಸಿ ಸಹ ಸಂಚಾಲಕಿ ಡಾ. ವಿದ್ಯಾ ಜೋಶಿ ಕಾರ್ಯಕ್ರಮ ನಿರ್ವಹಿಸಿದರು. ಡಾ. ಬಸಮ್ಮ ವಂದಿಸಿದರು.























