
ಯಡ್ರಾಮಿ:ಮಾ.9: ಶರಣಬಸವೇಶ್ವರರ ಮೂಲ ನೆಲೆಯಾದ ಯಡ್ರಾಮಿಯಲ್ಲಿ ಭಾನುವಾರ 204 ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ರಥೋತ್ಸವದ ವೇಳೆ ಮಹಿಳೆಯೊಬ್ಬರ ಎರಡೂ ಕಾಲುಗಳು ರಥದ ಗಾಲಿಗೆ ಸಿಲುಕಿಕೊಂಡು ನಜ್ಜುಗುಜ್ಜಾಗಿವೆ. ತೀವ್ರ ಗಾಯಗೊಂಡಿದ್ದ ಅವರನ್ನು ಕಲಬುರಗಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಂಜೆ ಭಕ್ತರು ಶರಣಬಸವೇಶ್ವರರ ರಥ ಎಳೆಯುತ್ತಿದ್ದ ವೇಳೆ ದೇವಸ್ಥಾನದ ಮುಂದೆ ಫಳಾರ ಹಾಕಿಸಿಕೊಳ್ಳುತ್ತಿದ್ದ ಗೃಹಿಣಿ ನಾಗಮ್ಮ ಕರೆಪ್ಪ ಯಲಗೋಡ ಅವರ ಕಾಲು ಮೇಲೆ ಹಾಯ್ದು ಹೋಯಿತು. ನೋವಿನಿಂದ ಚೀರಾಡುತ್ತಿದ್ದ ಅವರನ್ನು ಯಡ್ರಾಮಿ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಗೆ ಕರೆದೊಯ್ಯಲಾಯಿತು.
ರಥೋತ್ಸವ: ಶರಣಬಸವೇಶ್ವರರ ಜಾತ್ರೆಯ ಅಂಗವಾಗಿ ಫೆ.17ರಿಂದ ಮಾ 8ರವರೆಗೆ ಶರಣಬಸವೇಶ್ವರರ ಪುರಾಣ ನಡೆಯಿತು. ಶನಿವಾರ ಬೆಳಿಗ್ಗೆ 6.15 ನಿಮಿಷಕ್ಕೆ ರುದ್ರಾಭಿಷೇಕ ಹಾಗೂ 8 ಗಂಟೆಗೆ ಜಂಗಮ ಗಣರಾಧನೆ ನಡೆಯಿತು. ಭಾನುವಾರ ಪುರಾಣ ಮಂಗಲ ಮುಂಜಾನೆ 10 ಗಂಟೆಗೆ ಶರಣಬಸವೇಶ್ವರರ ಬೆಳ್ಳಿ ಪಲ್ಲಕ್ಕಿ ಮತ್ತು ಕರಿದೇವರ ಪಲ್ಲಕ್ಕಿ ಉತ್ಸವ ಪುರವಂತರು ವಾದ್ಯ ವೈಭವದೊಂದಿಗೆ ಮೆರವಣಿಗೆ ಜರುಗಿತು. ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.




















