ಬೆಂಗಳೂರು- ಮುಂಬೈ ನಡುವೆ ಸೂಪರ್ ಫಾಸ್ಟ್ ರೈಲಿಗೆ ಸಮ್ಮತಿ

ಬೆಂಗಳೂರು ಸೆ.೨೭- ಬೆಂಗಳೂರು ಮತ್ತು ಮುಂಬೈ ನಡುವೆ ಹೊಸ ಸೂಪರ್‌ಫಾಸ್ಟ್ ರೈಲಿಗೆ ಕೇಂದ್ರ ರೈಲ್ವೆ ಸಚಿವಾಲಯವು ಅನುಮೋದನೆ ನೀಡಿದೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ಬಗ್ಗೆ ಮಾಹಿತಿ ಕೊಂಡಿರುವ ಅವರು ಈ ಅನುಮೋದನೆಯಿಂದ ಎರಡೂ ನಗರಗಳ ನಾಗರಿಕರ ೩೦ ವರ್ಷಗಳ ಬೇಡಿಕೆಯನ್ನು ಈಡೇರಿಸಲಾಗಿದೆ. ಎಂದಿದ್ದಾರೆ

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು “ಬೆಂಗಳೂರು ಮತ್ತು ಮುಂಬೈ ನಡುವೆ ನಾವು ಶೀಘ್ರದಲ್ಲೇ ಸೂಪರ್‌ಫಾಸ್ಟ್ ರೈಲನ್ನು ಪ್ರಾರಂಭಿಸುವುದಾಗಿ ತಿಳಿಸಿದ್ದು, ಎರಡೂ ನಗರಗಳು ಪ್ರಮುಖ ಆರ್ಥಿಕ ಕೇಂದ್ರಗಳಾಗಿದ್ದು ಅವುಗಳ ನಿಲ್ದಾಣಗಳಲ್ಲಿನ ಸಾಮರ್ಥ್ಯದ ವಿಸ್ತರಣೆಯಿಂದಾಗಿ ಈ ಹೊಸ ರೈಲು ಓಡಾಟ ಸಾಧ್ಯವಾಗಿದೆ” ಎಂದು ಅವರು ತಮಗೆ ಮಾಹಿತಿ ನೀಡಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.

ಬೆಂಗಳೂರು ಮತ್ತು ಮುಂಬೈ ಭಾರತದ ಎರಡು ಪ್ರಮುಖ ಆರ್ಥಿಕ ಕೇಂದ್ರಗಳಾಗಿದ್ದರೂ, ಈ ಎರಡೂ ನಗರಗಳು ಕೇವಲ ಒಂದೇ ಒಂದು ರೈಲಿನಿಂದ ಸಂಪರ್ಕ ಹೊಂದಿದ್ದವು. ಆ ರೈಲು ಉದ್ಯಾನ ಎಕ್ಸ್‌ಪ್ರೆಸ್ ಆಗಿದ್ದು, ಈ ಪ್ರಯಾಣವನ್ನು ಪೂರ್ಣಗೊಳಿಸಲು ೨೪ ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು.

೩೦ ವರ್ಷಗಳಿಂದ ಬಾಕಿ ಉಳಿದಿದ್ದ ಬೇಡಿಕೆಯಾಗಿದೆ. ಕಳೆದ ಮೂರು ದಶಕಗಳಲ್ಲಿ ಎರಡೂ ನಗರಗಳ ಬೆಳವಣಿಗೆಯ ಹೊರತಾಗಿಯೂ, ಬೆಂಗಳೂರು ಮತ್ತು ಮುಂಬೈ ನಡುವೆ ಕೇವಲ ಒಂದು ಸೂಪರ್‌ಫಾಸ್ಟ್ ರೈಲು ಮಾತ್ರ ಇತ್ತು. ಕಳೆದ ವರ್ಷವೊಂದರಲ್ಲೇ ೨೬ ಲಕ್ಷಕ್ಕೂ ಹೆಚ್ಚು ಜನರು ಈ ಎರಡು ನಗರಗಳ ನಡುವೆ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಈ ಹೊಸ ಸೇವೆಯು ಲಕ್ಷಾಂತರ ನಾಗರಿಕರಿಗೆ ಪ್ರಯಾಣವನ್ನು ಹೆಚ್ಚು ಕೈಗೆಟುಕುವ ದರದಲ್ಲಿ ಅನುಕೂಲಕರವಾಗಿಸಲಿದೆ” ಎಂದು ಸೂರ್ಯ ಹೇಳಿದ್ದಾರೆ.


ಈ ಹೊಸ ರೈಲು ಪ್ರಯಾಣದ ದಟ್ಟಣೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಮತ್ತು ವಿಮಾನ ಹಾಗೂ ಬಸ್‌ಗಳಿಗೆ ಆರಾಮದಾಯಕವಾದ ಪರ್ಯಾಯವನ್ನು ಒದಗಿಸುತ್ತದೆ. ಅಲ್ಲದೆ, ಇದು ಎರಡು ಮಹಾನಗರಗಳ ನಡುವಿನ ಆರ್ಥಿಕ ಮತ್ತು ಸಾಮಾಜಿಕ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುತ್ತದೆ.


ಕರ್ನಾಟಕದ ಜನತೆ ಮತ್ತು ಕನ್ನಡಿಗರ ಪರವಾಗಿ, ಈ ಬಹುಕಾಲದ ಕನಸನ್ನು ನನಸಾಗಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಜಿ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಜಿ ಅವರಿಗೆ ಸೂರ್ಯ ಅವರು ತಮ್ಮ ಕೃತಜ್ಞತೆಯನ್ನು ಸಲ್ಲಿಸಿದರು. ಈ ಕಾರ್ಯಕ್ಕೆ ಬೆಂಬಲ ನೀಡಿದ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೂ ಅವರು ಧನ್ಯವಾದ ಹೇಳಿದ್ದಾರೆ