ಪ್ರವಾಸೋದ್ಯಮ ಪ್ರಾಧಿಕಾರ ರಚನೆ ಕುರಿತು ಸೂಕ್ತ ನಿರ್ಧಾರ

ಬೆಂಗಳೂರು,ಆ.೨೨-ರಾಯಲ್ ಪ್ರಾಂತೀಯ ಪ್ರವಾಸೋದ್ಯಮ ಪ್ರಾಧಿಕಾರ ರಚನೆಗೆ ಸಂಬಂಧಿಸಿದಂತೆ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಅವರು ಮೇಲ್ಮನೆಗೆ ತಿಳಿಸಿದರು.


ಕರ್ನಾಟಕ ಪ್ರವಾಸೋದ್ಯಮ ವ್ಯಾಪಾರ (ಸೌಲಭ್ಯ -ನಿಯಂತ್ರಣ) ತಿದ್ದುಪಡಿ ವಿಧೇಯಕ ಅಂಗೀಕಾರ ಚರ್ಚೆ ವೇಳೆ ಪ್ರಾಧಿಕಾರ ರಚನೆಗೆ ಸಂಬಂಧಿಸಿದಂತೆ ಸದಸ್ಯ ಎಚ್. ವಿಶ್ವನಾಥ ಅವರ ಸಲಹೆ ಪರಿಗಣಿಸಿದ ಅವರು ಪ್ರಾಧಿಕಾರ ರಚನೆ ಆಶಯ ವ್ಯಕ್ತಪಡಿಸಿದರು.


ಸದಸ್ಯೆ ಹೇಮಲತಾ ನಾಯಕ, ಅಂಜನಾದ್ರಿ ಬೆಟ್ಟಕ್ಕೆ ಮೂಲ ಭೂತ ಸೌಕರ್ಯ ಕಲ್ಪಿಸಿ ಎಂದು ಒತ್ತಾಯಿಸಿದರೆ, ಪಿ.ಎಚ್. ಪೂಜಾರ ಅವರು ಚಿಕ್ಕಸಂಗಮದಿಂದ ಆಲಮಟ್ಟಿಗೆ ಬೋಟಿಂಗ್ ವ್ಯವಸ್ಥೆ ಕಲ್ಪಿಸಿ ಎಂದು ಸಲಹೆ ನೀಡಿದರು.


ಸಚಿವ ಎಚ್.ಕೆ. ಪಾಟೀಲ, ಸವದತ್ತಿ ಯಲ್ಲಮ್ಮನ ಗುಡ್ಡ ಸಮಗ್ರ ಅಭಿವೃದ್ಧಿಗಾಗಿ ೨೩೦ ಕೋಟಿ ರೂ. ಮೀಸಲಿರಿಸಿಲಾಗಿದ್ದು, ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ, ಅದೇ ತೆರನಾಗಿ ಅಂಜನಾದ್ರಿ ಬೆಟ್ಟದಲ್ಲಿ ರೂಪ್ ವೇ ಕೇಬಲ್ ಕಾರ್ ಅಳವಡಿಕೆ ಮಾಡುವ ನಿಟ್ಟಿನಲ್ಲಿ ಸರ್ಕಾರ ನಿರ್ಧರಿಸಿದ್ದು ಡಿಸೆಂಬರ್ ವೇಳೆಗೆ ಈ ಕಾಮಗಾರಿ ಆರಂಭವಾಗಲಿದೆ ಎಂದರು.


ಬೇರೆ ದೇಶಗಳು ಪ್ರವಾಸೋದ್ಯಮ ಅವಲಂಬಿಸಿ ದೊಡ್ಡ ಆದಾಯ ಗಳಿಸುತ್ತಿವೆ, ನಮ್ಮ ರಾಜ್ಯದಲ್ಲಿ ಪ್ರವಾಸೋದ್ಯಮ ಉತ್ತೇಜನ ದೊರಕುತ್ತಿಲ್ಲ ಎಂದು ಮೇಲ್ಮನೆ ಸದಸ್ಯರಾದ ನವೀನ್ ಕುಮಾರ, ಡಿ.ಎಸ್. ಅರುಣ ಮೊದಲಾದವರು ವಿಷಯ ಪ್ರಸ್ತಾಪಿಸಿದರು.


ಈ ವೇಳೆ ಉತ್ತರಿಸಿದ ಸಚಿವ ಎಚ್.ಕೆ. ಪಾಟೀಲ, ನಮ್ಮ ರಾಜ್ಯದ ಪ್ರವಾಸೋದ್ಯಮವನ್ನು ಬೇರೆ ದೇಶ, ರಾಜ್ಯಗಳಿಗೆ ಹೋಲಿಕೆ ಬೇಡ, ಕೆಲವೊಂದು ದೇಶಗಳಲ್ಲಿ ನೈಟ್ ಕ್ಲಬ್ ಸಂಸ್ಕೃತಿಯಿಂದ ಪ್ರವಾಸೋದ್ಯಮ ಬೆಳೆದಿದೆ, ಆದರೆ ನಮ್ಮದು ನೈಟ್ ಕ್ಲಬ್ ಸಂಸ್ಕೃತಿಯಲ್ಲ ಎಂದರು.


ಶಕ್ತಿ ಯೋಜನೆ ಕಾರಣದಿಂದಾಗಿ ಡೋಮಾಸ್ಟಿಕ್ ಟೂರಿಸಂ ಬೆಳವಣಿಗೆಯಾಗಿದೆ, ಆದಾಯ ಇಲ್ಲದಿರಬಹುದು, ಆದರೆ ನಮ್ಮ ಸರ್ಕಾರದ ಲಕ್ಷ್ಯ ಆದಾಯ ಗಳಿಸುವುದಲ್ಲ, ನಮ್ಮ ಕರ್ನಾಟಕವನ್ನು ಎಲ್ಲರೂ ನೋಡಬೇಕು ಎನ್ನುವುದು, ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ ವಾರ್ಷಿಕ ೧.೨೩ ಕೋಟಿ ಜನರು ಭೇಟಿ ನೀಡುತ್ತಾರೆ, ನಮ್ಮದು ಟೆಂಪಲ್ ಟೂರಿಸಂ ಎಂದರು. ಸುದೀರ್ಘ ಚರ್ಚೆ ಬಳಿಕ ಈ ಕಾಯ್ದೆಗೂ ಅಂಗೀಕಾರ ದೊರಕಿತು.