ಕಲಬುರಗಿ: ಸೆ.23: ರಾಜ್ಯಾದ್ಯಂತ ನಡೆಯುತ್ತಿರುವ ಕಟ್ಟಡ ಕಾರ್ಮಿಕರ ಪ್ರತಿಭಟನೆ ಭಾಗವಾಗಿ ನೀಡುತ್ತಿರುವ ಬೇಡಿಕೆ ಪಟ್ಟಿ, ಕಟ್ಟಡ ನಿರ್ಮಾಣ ಕಾರ್ಮಿಕರ ಸಮಸ್ಯೆಗಳು ಹಾಗೂ ಹಲವು ಬೇಡಿಕೆಗಳಿಗಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ವತಿಯಿಂದ ನಗರದ ಕಾರ್ಮಿಕರ ಕಚೇರಿ ಎದುರು ಪ್ರತಿಭಟನೆ ನಡೆಸಿ ಕಾರ್ಮಿಕರ ಉಪ ಆಯುಕ್ತರ ಮೂಲಕ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸುರಕ್ಷಾ ಭವನದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಕಾರ್ಯದರ್ಶಿ ಡಾ: ಭಾರತಿ ಐಎಎಸ್ ಅವರಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (ರಿ.) ರಾಜ್ಯ ಮಟ್ಟದ ಸಮ್ಮೇಳನವು ಆಗಸ್ಟ್ 24-25 ರಂದು ಕೊಪ್ಪಳದಲ್ಲಿ ನಡೆದಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಂದ ಆಯ್ದ 300 ಜನ ಕಾರ್ಮಿಕ ಪ್ರತಿನಿಧಿಗಳು ಭಾಗವಹಿಸಿದ್ದರು.
ಈ ಸಮ್ಮೇಳನದಲ್ಲಿ ಕಾರ್ಮಿಕರ ಆರ್ಥಿಕ, ಸಾಮಾಜಿಕ ವಿಷಯಗಳು, ಕಾರ್ಮಿಕರ ಸುರಕ್ಷತೆ, ಸಾಮಾಜಿಕ ಭದ್ರತೆ ಒದಗಿಸುವ ಸರ್ಕಾರದ ಯೋಜನೆಗಳ ಪರಾಮರ್ಷ, ಇದರಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಪಾತ್ರದ ಕುರಿತು ಸುಧೀರ್ಘ ಮತ್ತು ಗಂಭೀರ ಚರ್ಚೆ ನಡೆದಿದೆ.
ಕಲ್ಯಾಣ ಮಂಡಳಿ ವತಿಯಿಂದ ಫಲಾನುಭವಿಗಳಿಗೆ ನೀಡಲಾಗುತ್ತಿರುವ ಸೌಲಭ್ಯಗಳಲ್ಲಿ ಶೈಕ್ಷಣಿಕ ಸಹಾಯಧನ, ವೈದ್ಯಕೀಯ ಸಹಾಯಧನ, ಪಿಂಚಣಿ, ಮದುವೆ ಸಹಾಯಧನದಂತಹ ಸೌಲಭ್ಯಗಳು ಕಾರ್ಮಿಕರ ಬದುಕಿಗೆ ಅಕ್ಷರಶಃ ಆಸರೆಯಾಗಿವೆ ಎಂಬ ಅಭಿಪ್ರಾಯ ಕಾರ್ಮಿಕರಿಂದ ವ್ಯಕ್ತವಾಗಿದೆ.
ಹಾಗೆಯೇ, ಕಾರ್ಮಿಕರಿಗೆ ನೀಡಲಾಗುವ ಯಾವುದೇ ತರಹದ ಕಿಟ್‍ಗಳು ನಿಷ್ಟ್ರಯೋಜಕ ಎಂಬ ಅಭಿಪ್ರಾಯಗಳೂ ಬಂದಿವೆ. ಪೆÇ್ರಕ್ಯೂರ್‍ಮೆಂಟ್ ಯೋಜನೆಗಳ ಮೂಲಕ ನೀಡಲಾಗುವ ಸೌಲಭ್ಯಗಳು ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸಬೇಕೆನ್ನುವ ಕಾಯ್ದೆಯ ಆಶಯವನ್ನು ಈಡೇರಿಸುವಲ್ಲಿ ವಿಫಲವಾಗಿವೆ ಎಂಬ ಕಟು ಟೀಕೆಗಳು ಕಾರ್ಮಿಕರಿಂದ ಬಂದಿವೆ.
ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯು ಕಾರ್ಮಿಕ ಸ್ನೇಹಿಯಾಗಿ ವರ್ತಿಸುವ ಬದಲು ಅದಕ್ಕೆ ತದ್ವಿರುದ್ದವಾಗಿ ಚಲಿಸುತ್ತಿದೆ. ಇಡೀ ಕಲ್ಯಾಣ ಮಂಡಳಿ ಪೆÇ್ರಕ್ಯೂರ್ ಮೆಂಟ್ ಯೋಜನೆಗಳ ಹಿಂದೆ ಬಿದ್ದು ವ್ಯಾವಹಾರಿಕ ಚಟುವಟಿಕೆಗಳಿಗೆ ಸೀಮಿತವಾಗುತ್ತಿದೆ ಎಂಬ ದೂರುಗಳು ಕೇಳಿ ಬಂದಿವೆ. 1996 ರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಾಯ್ದೆಯು ನಿರ್ಮಾಣ ವಲಯದಲ್ಲಿ ಸುರಕ್ಷತೆ, ಅಪಾಯಕಾರಿ ನಿರ್ಮಾಣ ಕೆಲಸಗಳಲ್ಲಿ ತೊಡಗಿರುವ ಕಾರ್ಮಿಕರು ಹಾಗೂ ಅವರ ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಕುಟುಂಬ ಸದಸ್ಯರಿಗೆ ಜಾರಿಗೊಳಿಸುವಾಗ ಇತರೆ ಸರ್ಕಾರಿ ಕಾಯ್ದೆ ಹಾಗೂ ನಿಯಮಗಳನ್ನು ಮುಂದು ಮಾಡಿ ಸೌಲಭ್ಯಗಳನ್ನು ನಿರಾಕರಿಸುವಂತಿಲ್ಲ ಎನ್ನುವುದನ್ನು ಸ್ಪಷ್ಟವಾಗಿ ಹೇಳಿದ್ದರೂ ಪಿಂಚಣಿ. ಶೈಕ್ಷಣಿಕ ಧನ ಸಹಾಯ ಇತ್ಯಾಧಿಗಳ ಜಾರಿಯಲ್ಲಿ ಮಂಡಳಿ ಅಧಿಕಾರಿಗಳು ಅತ್ಯಂತ ಯಾಂತ್ರಿಕವಾಗಿ ಕೆಲಸ ಮಾಡುತ್ತಿರುವುದು ಅದಕ್ಕೆ ರೂಪಕವಾಗಿ ನಿಯಮಗಳನ್ನು ರೂಪಿಸುತ್ತಿರುವುದು ಅತ್ಯಂತ ಖೇದದ ಸಂಗತಿಯಾಗಿದೆ.
ಕಾರ್ಮಿಕ ಸಚಿವರಾದ ಶ್ರೀ ಸಂತೋಷ್ ಲಾಡ್ ಅವರು ಕಲ್ಯಾಣ ಮಂಡಳಿಯ ಅಧ್ಯಕ್ಷರಾಗಿ ಬಂದ ಆರಂಭದಲ್ಲಿ ಹೀಗೆ ಹೇಳಿದ್ದರು. ‘ಭವಿಷ್ಯದಲ್ಲಿ ದೊಡ್ಡ ಸಂಖ್ಯೆಯ ಪಿಂಚಣಿದಾರರು ಸೃಷ್ಟಿಯಾಗುತ್ತಾರೆ. ಹೀಗಾಗಿ ಪಿಂಚಣಿಗಾಗಿ ನಿಧಿಯನ್ನು ಮೀಸಲಾಗಿರಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಪಿಂಚಣಿ ನೀಡಲು ಸಾಧ್ಯವಾಗದ ಸ್ಥಿತಿಗೆ ಮಂಡಳಿ ತಲುಪಬಹುದು’ ಎಂದು ಕಳವಳ ವ್ಯಕ್ತಪಡಿಸಿದ್ದರು. ಸಚಿವರ ಮಾತಿನಲ್ಲಿ ವಾಸ್ತವತೆ ಮತ್ತು ಕಾಳಜಿ ಇತ್ತು. ಆದರೆ ಇತ್ತೀಚೆಗೆ ಮಂಡಳಿಯು ಜಾರಿಗೊಳಿಸುತ್ತಿರುವ ಯೋಜನೆಗಳು ಅದಕ್ಕೆ ತದ್ವಿರುದ್ದವಾಗಿವೆ.
ಈಗಲೂ ಕಿಟ್ ಖರೀದಿಗಳು ನಿಂತಿಲ್ಲ. ಕಾರ್ಮಿಕರ ವೈದ್ಯಕೀಯ ತಪಾಸಣೆಯ ಕಾರ್ಯಕ್ರಮದಲ್ಲಿ 258 ಕೋಟಿ ರೂಪಾಯಿ ದರ್ಬಳಕೆ ಆಗಿದೆ ಎಂದು ಸಿಎಜಿ ವರದಿ ಮಾಡಿರುವುದು ಮಾಧ್ಯಮಗಳಲ್ಲಿ ಸುದ್ದಿಯಾಗಿದೆ. ಕೌಶಲ್ಯಾಭಿವೃದ್ಧಿ ಕೇಂದ್ರಗಳು, ವಸತಿ ಶಾಲೆಗಳನ್ನು ನಿರ್ಮಾಣ ಮಾಡುವ ಕಲ್ಯಾಣ ಮಂಡಳಿ ಯೋಜನೆಗಳು ಭವಿಷ್ಯದಲ್ಲಿ ಮಂಡಳಿಗೆ ಬಿಳಿಯಾನೆ ಆಗಲಿವೆ.
ಕಾರ್ಮಿಕರಿಗೆ ಮನೆ ನಿರ್ಮಾಣಕ್ಕೆ ಸಹಾಯಧನ, ಭವಿಷ್ಯ ನಿಧಿ ಯೋಜನೆಯಂತಹ ರಚನಾತ್ಮಕ ಯೋಜನೆಗಳನ್ನು ಜಾರಿಗೆ ತನ್ನಿ ಎಂದು ಒತ್ತಾಯಿಸುತ್ತಿದ್ದರೂ ಕಲ್ಯಾಣ ಮಂಡಳಿ ಕಿವುಡುತನ ಪ್ರದರ್ಶಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕಟ್ಟಡ ಕಾರ್ಮಿಕರ ರಾಜ್ಯ ಸಮ್ಮೇಳನವು ಈ ಕೆಳಕಂಡ ಬೇಡಿಕೆಗಳಿಗೆ ಒತ್ತಾಯಿಸಿ ದಿನಾಂಕ: 22.09.2025 ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ, ಬೇಡಿಕೆ ಪಟ್ಟಿಯನ್ನು ಸಲ್ಲಿಸಲು ನಿರ್ಣಯ ಕೈಗೊಂಡಿತು. ಅದರಂತೆ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಈ ಮೇಲೆ ವಿವರಿಸಿದ ಕಾರ್ಮಿಕರ ಅಭಿಪ್ರಾಯಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಜತೆಗೆ ಈ ಕೆಳಕಂಡ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಒತ್ತಾಯಿಸುತ್ತೇವೆ. ಕಲ್ಯಾಣ ಮಂಡಳಿಯು ಈ ಬಗ್ಗೆ ಸ್ಪಂದಿಸದಿದ್ದರೆ ನವೆಂಬರ್ ಕೊನೆವಾರದಲ್ಲಿ ಮಂಡಳಿಯು ಮುಂದೆ ಅನಿರ್ಧಿಷ್ಟ ಹೋರಾಟ ನಡೆಸಲು ನಿರ್ಧರಿಸಲಾಗಿದೆ ಎನ್ನುವ ಅಂಶವನ್ನು ತಮ್ಮ ಗಮನಕ್ಕೆ ತರಬಯಸುತ್ತೇವೆ. ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಶ್ರೀಮಂತ ಬಿರಾದಾರ, ಬಾಬು ಹೂವಿನಳ್ಳಿ, ನಾಗಪ್ಪ ರಾಯಚೂರಕರ್, ಶಿವಾನಂದ ಹೋಟಕರ, ಕಲ್ಯಾಣಿ ಸಿಂಗೆ, ಯಶವಂತ ಪಾಟೀಲ, ನಾಗಯ್ಯ ಸ್ವಾಮಿ, ಶ್ರೀದೇವಿ ನಾಗೇಂದ್ರ, ಹಣಮಂತ ಗುತ್ತೇದಾರ ಸೇರಿದಂತೆ ಇತರರು ಇದ್ದರು.























