ಬೀದರ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆಗೆ ಕೇಂದ್ರ ಸಚಿವರಿಗೆ ಮನವಿ

ಬೀದರ:ನ.12:ಬೀದರ ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಒದಗಿಸುವಂತೆ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಶ್ರೀ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ರಾಜಶೇಖರ ಜವಳೆ ಅವರು ಮನವಿ ಸಲ್ಲಿಸಿದ್ದಾರೆ.

ಪ್ರಸ್ತುತ ಜಿಲ್ಲೆಯಲ್ಲಿ ಕೈಗಾರಿಕೆಗಳ ಕೊರತೆಯಿಂದ ಅನೇಕ ಯುವಕರು ಉದ್ಯೋಗಕ್ಕಾಗಿ ಹೊರರಾಜ್ಯದ ವಿವಿಧ ನಗರಗಳಿಗೆ ವಲಸೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಬೀದರ ನಗರದ ಕೋಳಾರ ಕೈಗಾರಿಕಾ ಪ್ರದೇಶದಲ್ಲಿರುವ ಕೆಲವು ರಾಸಾಯನಿಕ ಕಾರ್ಖಾನೆಗಳಿಂದ ಹೊರಬರುವ ವಿಷಪೂರಿತ ಹೊಗೆ ಮತ್ತು ತ್ಯಾಜ್ಯದಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವುದರಿಂದ, ಪರಿಸರ ಸ್ನೇಹಿ ಹಾಗೂ ಉದ್ಯೋಗಮುಖಿ ಕೈಗಾರಿಕೆಗಳನ್ನು ಜಿಲ್ಲೆಯಲ್ಲಿ ಸ್ಥಾಪಿಸುವ ಅಗತ್ಯವಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಹೊಸ ಕೈಗಾರಿಕೆಗಳು ಸ್ಥಾಪನೆಯಾಗುವುದರಿಂದ ವಲಸೆ ಹೋಗಬೇಕಾದ ಪರಿಸ್ಥಿತಿಯಿಂದ ಯುವಕರು ತೀರುವುದು ಮಾತ್ರವಲ್ಲ, ಜಿಲ್ಲೆಯ ಆರ್ಥಿಕ ಮತ್ತು ಕೈಗಾರಿಕಾ ಅಭಿವೃದ್ಧಿ ಕೂಡ ವೇಗ ಪಡೆಯಲಿದೆ ಎಂದು ಜವಳೆ ತಿಳಿಸಿದ್ದಾರೆ.