ಆಂಧ್ರ ಸಿಎಂಗೆ ಸಿದ್ದು ಪತ್ರ
ಬೆಂಗಳೂರು, ಜೂ. ೧೨- ಕರ್ನಾಟಕ ತೋತಾಪುರಿ ಮಾವು ನಿಷೇಧಿಸಿ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲಾಡಳಿತ ಹೊರಡಿಸಿರುವ ಆದೇಶವನ್ನು ಹಿಂಪಡೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಒತ್ತಾಯಿಸಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಪತ್ರ ಬರೆದು ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲಾಡಳಿತವು ಕರ್ನಾಟಕದ ತೋತಾಪುರಿ ಮಾವು ಖರೀದಿಗೆ ನಿಷೇಧ ಹೇರಿರುವುದರಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ನಿರ್ಧಾರವನ್ನು ಹಿಂಪಡೆಯುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿ ಎಂದು ಆಗ್ರಹಿಸಿದ್ದಾರೆ.
ಇತರ ರಾಜ್ಯಗಳಿಂದ ತೋತಾಪುರಿ ಮಾವಿನ ಹಣ್ಣನ್ನು ಜಿಲ್ಲೆಗೆ ಪ್ರವೇಶಿಸುವುದನ್ನು ನಿಷೇಧಿಸಿ ಚಿತ್ತೂರು ಜಿಲ್ಲಾಧಿಕಾರಿಗಳು ಜೂನ್ ೭ ರಂದು ಆದೇಶ ಹೊರಡಿಸಿದ್ದಾರೆ.
ಈ ಹಠಾತ್ ಮತ್ತು ಏಕಪಕ್ಷೀಯ ಕ್ರಮವು ಕರ್ನಾಟಕ ಮಾವು ಬೆಳೆಗಾರರಿಗೆ ತೊಂದರೆ ಉಂಟು ಮಾಡಿದೆ. ಗಡಿ ಭಾಗದ ರೈತರು ಉತ್ಪನ್ನಗಳನ್ನು ಮಾರಾಟ ಮಾಡಲು ಚಿತ್ತೂರು ಮೂಲದ ಸಂಸ್ಕರಣಾ ಘಟಕಗಳೊಂದಿಗೆ ದೀರ್ಘ ಕಾಲದಿಂದ ಸಂಪರ್ಕ ಹೊಂದಿದ್ದಾರೆ.
ಈ ನಿರ್ಬಂಧವೂ ಈ ಹಿಂದೆ ಸ್ಥಾಪಿಸಿರುವ ಪೂರೈಕೆ ಸರಪಳಿಯನ್ನು ಅಡ್ಡಿಪಡಿಸಿದೆ ಮತ್ತು ಕೊಯ್ಲಿನ ನಂತರ ನಷ್ಟವನ್ನುಂಟು ಮಾಡಿದೆ. ರೈತರ ಜೀವನೋಪಾಯದ ಮೇಲೆ ಇದು ನೇರವಾಗಿ ಪರಿಣಾಮ ಬೀರುತ್ತದೆ ಎಂದು ಸಿದ್ದರಾಮಯ್ಯ ಅವರು ಆಂಧ್ರ ಸಿಎಂಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.
ಈ ರೀತಿಯ ತೀರ್ಮಾನ ಸಹಕಾರಿ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ. ಪೂರ್ವ ಸಮಾಲೋಚನೆ ಅಥವಾ ಸಮನ್ವಯ ಇಲ್ಲದೆ ತೆಗೆದುಕೊಳ್ಳುವ ಈ ಕ್ರಮಗಳು ಉದ್ವಿಗ್ನತೆ ಮತ್ತು ಪ್ರತೀಕಾರದ ಕ್ರಮಗಳಿಗೆ ಕಾರಣವಾಗಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಈ ರೀತಿಯ ತೀರ್ಮಾನಗಳು ತರಕಾರಿ ಮತ್ತು ಇತರ ಕೃಷಿ ಸರಕುಗಳ ಅಂತಾರಾಜ್ಯ ಸಾಗಣೆಯನ್ನು ಅಡ್ಡಿಪಡಿಸಬಹುದು. ಹಾಗಾಗಿ ಈ ವಿಚಾರದಲ್ಲಿ ನೀವು ಮಧ್ಯೆ ಪ್ರವೇಶಿಸಿ ಚಿತ್ತೂರು ಜಿಲ್ಲಾಡಳಿತದ ಆದೇಶವನ್ನು ತಕ್ಷಣವೇ ರದ್ದುಪಡಿಸಲು ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಬೇಕು ಎಂದು ವಿನಂತಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರದಲ್ಲಿ ತಿಳಿಸಿದ್ದಾರೆ.