
ಕಲಬುರಗಿ ;ಫೆ.21: ವಿಶ್ವಗುರು ಬಸವಣ್ಣನವರ ಅರಿವಿನ ಮನೆಯ ಪಕ್ಕದ ಗವಿಯು ಶರಣ ಹಡಪದ ಅಪ್ಪಣ್ಣನವರದಾಗಿದ್ದು, ಅಲ್ಲಿ ಬೇರೆ ಮೂರ್ತಿ ಕೂಡಿಸಿರುವುದನ್ನು ತೆರವು-ಗೊಳಿಸಿ ಶರಣ ಹಡಪದ ಅಪ್ಪಣ್ಣನವರ ಮೂರ್ತಿಯನ್ನು ಕೂಡಿಸಿ ಹಡಪದ ಸಮಾಜಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಕಲಬುರ್ಗಿ ತಾಲೂಕ ಹಡಪದ ಸಮಾಜದ ಅಧ್ಯಕ್ಷ ಚಂದ್ರಶೇಖರ ತೊನಸನಹಳ್ಳಿ (ಟಿ) ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
12ನೇ ಶತಮಾನದ ವಿಶ್ವಗುರು ಬಸವಣ್ಣನವರ ಆಪ್ತಕಾರ್ಯದರ್ಶಿಗಳಾದಂತ ಹಡಪದ ಅಪ್ಪಣ್ಣನವರ ಅರಿವಿನ ಗವಿಯನ್ನು ಬಸವಣ್ಣನವರ ಅರಿವಿನ ಮನೆಯ ಪಕ್ಕದಲ್ಲಿಯೇ ಇದ್ದು, ಈ ಅರಿವಿನ ಗವಿಯಲ್ಲಿ ಬೇರೆ ಶರಣರ-ಶರಣೀಯರ ಮೂರ್ತಿಯನ್ನು ಕಾನೂನಿನ ಬಾಹಿರವಾಗಿ ಹಾಗೂ ಪ್ರಾಧಿಕಾರ ಮತ್ತು ಸರ್ಕಾರದ ಆದೇಶವನ್ನು ಮೀರಿ ಬಸವೇಶ್ವರ ದೇವಸ್ಥಾನದ ಪಂಚ ಕಮಿಟಿಯವರು ಕೂಡಿಸಿದ್ದಾರೆ. ಅದಕ್ಕಾಗಿ ಮುಖ್ಯಮಂತ್ರಿಗಳು ಇದನ್ನು ಪರಿಗಣನೆಗೆ ತೆಗೆದುಕೊಂಡು ಹಡಪದ ಸಮಾಜಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ವಿನೋದ ಅಂಬಲಗಾ, ಕಾಯಾಧ್ಯಕ್ಷ ರಮೇಶ ಕವಲಗಾ, ಜಿಲ್ಲಾ ಕಾರ್ಯಧ್ಯಕ್ಷ ಭಗವಂತ ಹಡಪದ ಕಿರಣಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ಹಡಪದ ನೀಲೂರ ಹಾಗೂ ಆಕಾಶ ತಳವಾರ ಇದ್ದರು.



























