
ಚಿಕ್ಕನಾಯಕನಹಳ್ಳಿ, ಡಿ. ೧೦- ರಾಗಿ ಖರೀದಿ ಮಾಡುವಾಗ ಹಮಾಲಿಗಳು ರೈತರಿಂದ ಹಣ ಕೇಳಬಾರದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಕೋಡಿಹಳ್ಳಿ ಚಂದ್ರಶೇಖರ್ ಬಣದ ರೈತರು ತಹಶೀಲ್ದಾರ್ ಕೆ.ಪುರಂದರ್ ರವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಟಿ.ಎಂ.ಮಲ್ಲಿಕಾರ್ಜುನಯ್ಯ, ಜನವರಿ ಮೊದಲ ವಾರದಲ್ಲಿ ರಾಗೀ ಖರೀದಿ ಕೇಂದ್ರ ಪ್ರಾರಂಭವಾಗಲಿದೆ. ರೈತರು ರಾಗಿ ಮಾರಾಟ ಮಾಡಲು ಕೇಂದ್ರಕ್ಕೆ ಹೋದಾಗ ಪ್ರತಿ ಚೀಲಕ್ಕೆ ೨೦ ರಂತೆ ೧ ಕ್ವಿಂಟಾಲ್‌ಗೆ ೪೦ ರೂ ಹಮಾಲಿಗಳು ರೈತರಿಂದ ಕಳೆದ ಬಾರಿ ಶುಲ್ಕ ಪಡೆಯುತ್ತಿದ್ದರು. ಈ ಬಾರಿ ರೈತರಿಂದ ಹಮಾಲಿಗಳು ಶುಲ್ಕತೆಗೆದುಕೊಳ್ಳಬಾರದು ಎಂದು ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ತೋಂಟಾರಾಧ್ಯ ಶೆಟ್ಟೀಕೆರೆ ಮಾತನಾಡಿ, ರಾಗಿ ಖರೀದಿ ಕೇಂದ್ರದ ನಿಯಮಾನುಸಾರವಾಗಿ ರೈತರು ಗುಣಮಟ್ಟದ ರಾಗಿಯನ್ನು ತರಬೇಕು. ಒಬ್ಬ ರೈತ ಗರಿಷ್ಟ ೫೦ ಕ್ವಿಂಟಾಲ್ ಮಾರಾಟ ಮಾಡಬಹುದಾಗಿದೆ. ರೈತರು ಮಾರಿದ ರಾಗಿಯ ಹಣವನ್ನು ಸರ್ಕಾರ ಒಂದು ವಾರದೊಳಗೆ ಫಲಾನುಭವಿ ಬ್ಯಾಂಕ್ ಖಾತೆಗೆ ಹಾಕಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘದ ಬಾಳೇಗೌಡ? ಮಾರಿಮುತ್ತು? ಚೇತನ್ ಪಟೇಲ್, ಲಿಂಗಣ್ಣ ಮತ್ತಿತರರು ಉಪಸ್ಥಿತರಿದ್ದರು.



























