ಚಿತ್ತಾಪುರ: ಜೂ.13:ಕಳೆದ ಐದನೆ ತಾರಿಕಿನಂದು ಕುರಿ ಕಾಯಲು ಹೋದ ಇಬ್ಬರು ಬಾಲಕರು ನೆಲಸಮ ಇರುವ ಬಾವಿಯಲ್ಲಿ ಬಿದ್ದು ಸಾವನ್ನಪ್ಪಿದ ದಾರುಣ ಘಟನೆ ನಡೆದಿದ್ದು ಮೃತ ಬಾಲಕರ ಕುಟುಂಬಕ್ಕೆ ತಲಾ 50ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಕುಟುಂಬಸ್ಥರು ಮತ್ತು ಮುಖಂಡರು ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ನೂತನವಾಗಿ ನಿರ್ಮಾಣಗೊಂಡಿರುವ ಮಿನಿ ವಿಧಾನಸೌಧದ ಹಿಂದುಗಡೆ ಇರುವ ತಡೆಗೋಡೆ ಇಲ್ಲದೆ ನೆಲಸಮ ಇರುವ ಬಾವಿಯ ಹತ್ತಿರ ಕುರಿ ಕಾಯುತ್ತಿರುವಾಗ ಬಾವಿ ಇರುವುದನ್ನು ಅರಿಯದೆ ತಂದೆ ತಾಯಿ ಇಲ್ಲದ ಬಾಲಕ ತನ್ನ ಅಜ್ಜಿಯ ಆಸರೆಯಲ್ಲಿದ್ದ ರಾಜಕುಮಾರ ತಂದೆ ಲಕ್ಷ್ಮಣ ಮತ್ತು ಕುಶಾಲ ತಂದೆ ಚನ್ನಪ್ಪ ಎಂಬ ಇಬ್ಬರು ಬಾಲಕರು ಬಾವಿಯಲ್ಲಿ ಬಿದ್ದು ಸಾವನ್ನಪ್ಪಿದ್ದು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 50 ಲಕ್ಷ ಪರಿಹಾರ ನೀಡುವಂತೆ ಮನವಿ ಮನವಿ ಪತ್ರ ಸಲ್ಲಿಸಿದರು.
ಅಲೆಮಾರಿ ಜನಾಂಗದವರಾದ ಯಾವುದೇ ಆರ್ಥಿಕ ಸಹಾಯ ಇಲ್ಲದ ಮೃತ ಬಾಲಕ ರಾಜಕುಮಾರನ ಅಜ್ಜಿ 67 ವರ್ಷದ ಲಕ್ಷ್ಮೀಬಾಯಿ ಗಂಡ ಶರಣಪ್ಪ ಮ್ತತು ಕುಶಾಲ ತಂದೆ ಚನ್ನಪ್ಪ ಅವರ ಎರಡು ಕುಟುಂಬದವರು ಕಡು ಬಡವರಾಗಿದ್ದು ಪ್ರತಿದಿನ ಕೂಲಿನಾಲಿ ಮಾಡಿಕೊಂಡು ತಮ್ಮ ಮಕ್ಕಳನ್ನು ಸಾಕುತ್ತಿದ್ದರು, ಬಾಳಿ ಬದುಕಬೇಕಿದ್ದ ಮಕ್ಕಳನ್ನು ಕಳೆದುಕೊಂಡು ಕಂಗಾಲಾಗಿರುವ ಕುಟುಂಬದವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪ್ರತಿ ಕುಟುಂಬಕ್ಕೆ 50 ಲಕ್ಷ ಪರಿಹಾರ ಒದಗಿಸಿ ಕಂಗಾಲಾದ ಕುಟುಂಬಕ್ಕೆ ಆಸರೆಯಾಗಬೇಕು ಎಂದು ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ,ದಲಿತ ಪರ ಸಂಘಟನೆಯ ಮುಖಂಡ ಉದಯಕುಮಾರ ಸಾಗರ್, ಬುಡ್ಗಜಂಗಮ ಕಲಬುರ್ಗಿ ಜಿಲ್ಲಾಧ್ಯಕ್ಷ ಪಂಡಿತ್ ಶಿರವಾಟಿ, ಬುಡ್ಗಜಂಗಮ ಸಮಾಜದ ಮುಖಂಡ ಮಾರುತಿ,ಚನ್ನಪ್ಪ ಸೇರಿದಂತೆ ಸಮಾಜದ ಅನೇಕ ಮುಖಂಡರು ಇದ್ದರು.