
ನವಲಗುಂದ,ಜ14: ತಾಲೂಕಿನಾದ್ಯಂತ ರೈತರ ಹತ್ತು-ಹಲವು ಸಮಸ್ಯೆಗಳ ಸುಳಿಯಲ್ಲಿ ಸಿಕ್ಕು ನರಳುತ್ತಿದ್ದಾರೆ. ಕೂಡಲೇ ರೈತರ ಸಮಸ್ಯೆಗಳಿಗೆ ಪ್ರಥಮ ಪ್ರಾಶಸ್ಯ ನೀಡಿ ಪರಿಹರಿಸಬೇಕೆಂದು ಆಗ್ರಹಿಸಿ ಭಾರತೀಯ ಕಿಸಾನ್ ಸಂಘ ಉತ್ತರ ಪ್ರಾಂತದ ತಾಲ್ಲೂಕು ಘಟಕದಿಂದ ತಹಶೀಲ್ದಾರ ಸುಧೀರ ಸಾಹುಕಾರ ಮುಖಾಂತರ ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು.
ಎಮ್.ಎಸ್.ಪಿ ದರದಲ್ಲಿ ಖರೀದಿ ಕೇಂದ್ರ, ಭೂಮಾಪನಾ ಇಲಾಖೆಯಲ್ಲಿನ ಪಹಣಿ ಒಟ್ಟುಗುಡಿಸುವುದು ಹಾಗೂ ಕನಿಷ್ಠ 8 ಅಳತೆ ಯಂತ್ರ, ವಿದ್ಯುತ್ ಪಂಪ್ ಸೆಟ್ ಗಳಿಗೆ ನಿರಂತರ ವಿದ್ಯುತ್, ಗುಮ್ಮಾಗೋಳ ಗ್ರಾಮದ ಹಳ್ಳದ ಹೋಳು ತೆಗೆದು ಬೇಟಸೂರ ಗ್ರಾಮದ ಮೂಲಕ ತಾಲ್ಲೂಕಿನ ಎಲ್ಲ ಕೆರೆ ತುಂಬಿಸಿ ಎಲ್ಲ ಕೆರೆಗಳ ಸಂರಕ್ಷಣೆ ಸೇರಿದಂತೆ ವಿವಿಧ 12 ಬೇಡಿಕೆಗಳ ಜ್ವಲಂತ ಸಮಸ್ಯೆಗಳನ್ನು ಸಂಪೂರ್ಣವಾಗಿ ಚರ್ಚಿಸಿ ಕಾರ್ಯರೂಪಕ್ಕೆ ತರಲು ನಿರ್ಣಯ ಕೈಗೊಳ್ಳಬೇಕು. ಒಂದು ವೇಳೆ ಬೇಡಿಕೆಗಳನ್ನು ಪರಿಗಣಿಸದೇ ಹೋದಲ್ಲಿ ಮುಂದಿನ ದಿನಮಾನಗಳಲ್ಲಿ ಸಮಗ್ರವಾಗಿ ಇಡೀ ರಾಜ್ಯಾದ್ಯಂತ ರೈತರು ಆಯಾ ಇಲಾಖೆಯ ಸಚಿವರ ಮನೆಯ ಮುಂದೆ ಸರದಿ ಅಥವಾ ಅಮರಣಾಂತ ‘ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಜಿಲ್ಲಾಧ್ಯಕ್ಷ ಗುರುನಾಥಗೌಡ ಅರಳಿಹೊಂಡ, ಮುಖ್ಯ ಸಂಚಾಲಕ ಪುಟ್ಟಸ್ವಾಮೀಜಿ, ತಾಲ್ಲೂಕು ಅಧ್ಯಕ್ಷ ಚಂದ್ರಗೌಡ ಪಕ್ಕೀರಗೌಡ್ರ, ಕಾರ್ಯದರ್ಶಿ ಬಸವರಾಜ ಮನಮಿ, ನಾಗಣ್ಣ ಬೆಳ್ಳಿಗಟ್ಟಿ, ಗೋಪಾಲ ದಿವಟೆ, ಸಿದ್ದನಗೌಡ ಕುಲಕರ್ಣಿ, ಹನುಮಂತಗೌಡ ಪಾಟೀಲ, ಗುರುನಾಥ ನೇಗಿನಹಾಳ, ಗೂಳಪ್ಪ ಹಿತ್ತಲಮನಿ ಇತರರು ಇದ್ದರು.




























