ಬೀದರ :ಆ.೧೩:ನಾಡಿನ ಪ್ರಸಿದ್ಧ ಧಾರ್ಮಿಕ ಕೇಂದ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೇವಾಲಯವು ಸುಮಾರು ೮೦೦ ವರ್ಷಗಳ ಪಾವನ ಇತಿಹಾಸವನ್ನು ಹೊಂದಿದೆ. ಈಗಿನ ೨೧ನೇ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಅನೇಕ ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಕಾರ್ಯಗಳನ್ನು ಕ್ಷೇತ್ರದಲ್ಲಿ ನಿರಂತರವಾಗಿ ನಡೆಸಲಾಗುತ್ತಿದೆ. ಪ್ರತಿದಿನ ರಾಜ್ಯ ಹಾಗೂ ಹೊರರಾಜ್ಯಗಳಿಂದ ಸಾವಿರಾರು ಭಕ್ತರು ದರ್ಶನಾರ್ಥವಾಗಿ ಬಂದು ಅನ್ನಪ್ರಸಾದ ಸೇವಿಸುತ್ತಾರೆ.
ಆದರೆ ಇತ್ತೀಚೆಗೆ, ಗಿರೀಶ ಮಟ್ಟಣ್ಣ, ಮಹೇಶ್ ತಿಮ್ಮರೋಡಿ, ಜಯಂತ್ ಟಿ ಹಾಗೂ ಯೂಟ್ಯೂಬರ್ ಸಮೀರ್ ಎಂ.ಡಿ ಎಂಬವರು ದೇವಾಲಯ ಮತ್ತು ಧರ್ಮಾಧಿಕಾರಿಗಳ ವಿರುದ್ಧ ಆಧಾರರಹಿತ, ಅವಹೇಳನಕಾರಿ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚುತ್ತಿರುವುದಾಗಿ ಭಕ್ತರು ಆರೋಪಿಸಿದ್ದಾರೆ. ಈ ಸುಳ್ಳು ಪ್ರಚಾರವು ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡುತ್ತಿದ್ದು, ಭವಿಷ್ಯದಲ್ಲಿ ಶಾಂತಿಭAಗ ಹಾಗೂ ಅರಾಜಕತೆ ಉಂಟಾಗುವ ಭೀತಿ ಇದೆ ಎಂದು ಅವರು ಹೇಳಿದ್ದಾರೆ.
ಮಾನ್ಯ ಉಚ್ಚ ನ್ಯಾಯಾಲಯವು ಧರ್ಮಸ್ಥಳ ಹಾಗೂ ಹೆಗ್ಗಡೆ ಕುಟುಂಬದ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನಿಷೇಧಿಸಿದ್ದರೂ, ಆರೋಪಿಗಳು ಅದನ್ನು ಲೆಕ್ಕಿಸದೆ ಅಪಪ್ರಚಾರ ಮುಂದುವರೆಸುತ್ತಿರುವುದಾಗಿ ಭಕ್ತರು ದೂರಿದ್ದಾರೆ.
ಈ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ (SIಖಿ) ಅಥವಾ ಹೊಸ ತನಿಖಾ ತಂಡವನ್ನು ನಿಯೋಜಿಸಿ, ಆರೋಪಿಗಳ ಹಿನ್ನಲೆ, ಅವರಿಗೆ ದೊರೆಯುತ್ತಿರುವ ಧನಸಹಾಯ ಹಾಗೂ ಪ್ರಚೋದಕರ ಕುರಿತು ಸಂಪೂರ್ಣ ತನಿಖೆ ನಡೆಸಬೇಕೆಂದು ಮನವಿ ಮಾಡಲಾಗಿದೆ. ಹಾಗೆಯೇ ಆರೋಪಿಗಳ ಮೊಬೈಲ್ ಫೋನ್, ಮನೆ ಮತ್ತು ಕಚೇರಿಗಳ ಪರಿಶೀಲನೆ ನಡೆಸಿ ಸತ್ಯಾಂಶವನ್ನು ಬಯಲಿಗೆ ತರುವಂತೆ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿರುವ ಅಪಪ್ರಚಾರವನ್ನು ತಕ್ಷಣ ನಿಲ್ಲಿಸುವಂತೆ ಒತ್ತಾಯಿಸಿ ಇಂದು ನಗರದ ಬರೀದ ಶಾಹಿ ಉದ್ಯಾನದಿಂದ ಪ್ರತಿಭಟನೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ತಲುಪಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಸೋಮನಾಥ ಪಾಟೀಲ, ಈಶ್ವರಸಿಂಗ್ ಠಾಕೂರ್, ಬಸವರಾಜ ಆರ್ಯ, ಬಾಬು ವಾಲಿ, ವಿರಶೆಟ್ಟಿ ಖ್ಯಾಮಾ, ಶಶಿ ಹೊಸಳ್ಳಿ, ವೀರುಪಾಕ್ಷ ಗಾದಗಿ, ಶಿವು ಲೊಖೋಂಡೆ ಅವರು ಧರ್ಮಸ್ಥಳದ ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಕಾರ್ಯಗಳನ್ನು ಉದ್ದೇಶಿಸಿ ಮಾತನಾಡಿದ್ದರು.

























