ಸಾರ್ವಜನಿಕ ಶೌಚಾಲಯಗಳ ಸೌಕರ್ಯ ಸುಧಾರಣೆಗೆ ಮನವಿ

ಕೊಲ್ಹಾರ:ಅ.೧೧: ಪಟ್ಟಣದ ಸಾರ್ವಜನಿಕ ಸ್ಥಳಗಳಲ್ಲಿನ ಶೌಚಾಲಯಗಳ ಸಮರ್ಪಕ ನಿರ್ವಹಣೆ ಇಲ್ಲದೆ, ಮೂಲಭೂತ ಸೌಕರ್ಯಗಳ ಕೊರತೆಯಿಂದ ಜನಸಾಮಾನ್ಯರು ತೀವ್ರ ಪರದಾಟ ನಡೆಸುತತಿದ್ದಾರೆ ಎಂದು ‘ಕೊಲ್ಹಾರ ಅಭಿವೃದ್ಧಿ ವೇದಿಕೆಯಿಂದ ಪಟ್ಟಣ ಪಂಚಾಯಿತಿಗೆ ಮನವಿ ಸಲ್ಲಿಸಿದರು,
ಪಟ್ಟಣದ ನಾಗರಿಕರು ಮತ್ತು ಹೊರಗಿನಿಂದ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ನಿರ್ಮಿಸಲಾದ ಶೌಚಾಲಯಗಳು ನೀರಿನ ಕೊರತೆ ಮತ್ತು ಸಂಪೂರ್ಣ ಅಸ್ವಚ್ಛತೆಯಿಂದ ಬಳಲುತ್ತಿವೆ. ಅದರಲ್ಲೂ ಪಟ್ಟಣದ ಪ್ರಮುಖ ಸ್ಥಳವಾದ ಯುಕೆಪಿ ಕ್ರಾಸ್‌ನಲ್ಲಿರುವ ಸಾರ್ವಜನಿಕ ಶೌಚಾಲಯವು ಸ್ವಚ್ಛತೆ ಇಲ್ಲದೆ ಹಾಗೂ ನೀರು ಸರಬರಾಜಿನ ತೀವ್ರ ಅಭಾವದಿಂದ ಬಳಕೆಗೆ ಯೋಗ್ಯವಾಗಿಲ್ಲ. ಈ ದುಃಸ್ಥಿತಿಯಿಂದಾಗಿ ಶೌಚಾಲಯ ಬಳಕೆದಾರರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ವೇದಿಕೆಯ ಸದಸ್ಯರು, ಸಾರ್ವಜನಿಕ ಆರೋಗ್ಯ ಮತ್ತು ನೈರ್ಮಲ್ಯಕ್ಕೆ ಸಂಬAಧಿಸಿದ ಈ ಗಂಭೀರ ಸಮಸ್ಯೆಯನ್ನು ಕೂಡಲೇ ಪರಿಹರಿಸಲು ಒತ್ತಾಯಿಸಿದ್ದಾರೆ. ಪಟ್ಟಣದ ಎಲ್ಲಾ ಸಾರ್ವಜನಿಕ ಶೌಚಾಲಯಗಳಲ್ಲಿ ನಿರಂತರ ಸ್ವಚ್ಛತೆಯನ್ನು ಖಾತರಿಪಡಿಸಲು ಒಬ್ಬ ಶಾಶ್ವತ ಸ್ವಚ್ಛತಾ ಸಿಬ್ಬಂದಿಯನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಅಲ್ಲದೆ, ಯುಕೆಪಿ ಕ್ರಾಸ್‌ನ ಶೌಚಾಲಯಕ್ಕೆ ತಕ್ಷಣ ನೀರಿನ ಸರಬರಾಜನ್ನು ಕಲ್ಪಿಸಬೇಕು. ಇದರ ಜೊತೆಗೆ, ಜನಸಂದಣಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ, ಅಲ್ಲಿ ಹೊಸ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸುವ ಕಾರ್ಯವನ್ನು ತಕ್ಷಣ ಆರಂಭಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಈ ಮೂಲಭೂತ ಅವಶ್ಯಕತೆಯನ್ನು ಪ.ಪಂ. ಗಂಭೀರವಾಗಿ ಪರಿಗಣಿಸಿ, ಕೂಡಲೇ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೊಲ್ಹಾರ ಅಭಿವೃದ್ಧಿ ವೇದಿಕೆಯಿಂದ ಮನವಿ ಸಲ್ಲಿಸಿ ಒತ್ತಾಯಿಸಿದರು,
ಈ ಸಂದರ್ಭದಲ್ಲಿ ಕೊಲ್ಹಾರ ಅಭಿವೃದ್ಧಿ ವೇದಿಕೆ ಸದಸ್ಯರಾದ ಸಂಗಮೇಶ್ ಬಾಟಿ ಪರಶುರಾಮ ಚಿಮ್ಮಲಗಿ ನಾಗರಾಜ ಕುಂಬಾರ ವಿಶ್ವನಾಥ್ ಬಾಟಿ ಕುಮಾರ್ ಹಿರೇಮಠ್ ಅಭಿಜಿತ್ ಭಾರಸ್ಕಳ ಶ್ರೀಧರ್ ಬಾಟಿ ಸಹಿತ ಅನೇಕರು ಉಪಸ್ಥಿತರಿದ್ದರು,