Home ಜಿಲ್ಲೆ ತುಮಕೂರು ಸಿದ್ದರಬೆಟ್ಟ ಆಳಿದ ಕುರಂಗರಾಯನ ಪ್ರಾಧಿಕಾರ ಸ್ಥಾಪನೆಗೆ ಮನವಿ

ಸಿದ್ದರಬೆಟ್ಟ ಆಳಿದ ಕುರಂಗರಾಯನ ಪ್ರಾಧಿಕಾರ ಸ್ಥಾಪನೆಗೆ ಮನವಿ

ಕೊರಟಗೆರೆ, ಫೆ. ೯- ಅನ್ಯ ಕಾರ್ಯ ನಿಮಿತ ಮಧುಗಿರಿಗೆ ಆಗಮಿಸಿ ಬೆಂಗಳೂರಿನ ಕಡೆ ಹೋಗುತ್ತಿದ್ದ ಆಹಾರ ಮತ್ತು ನಾಗರೀಕ ಸರಬರಾಜು, ಗ್ರಾಹಕ ವ್ಯವಹಾರಗಳ ಸಚಿವ ಕೆ.ಹೆಚ್.ಮುನಿಯಪ್ಪ ಅವರನ್ನು ಕೊರಟಗೆರೆ ದಲಿತ ಮುಖಂಡರು ಸ್ವಾಗತಿಸಿ, ಸಿದ್ದರಬೆಟ್ಟ ಆಳಿದ ಕುರಂಗರಾಯನ ಪ್ರಾಧಿಕಾರ ಸ್ಥಾಪಿಸುವಂತೆ ಮನವಿ ಸಲ್ಲಿಸಿದರು.


ಪಟ್ಟಣದ ಹೊರವಲಯದ ಬೆಂಗಳೂರು ರಾಜ್ಯ ಹೆದ್ದಾರಿಯಲ್ಲಿ ಅನ್ಯ ಕಾರ್ಯ ನಿಮಿತ ಮಧುಗಿರಿಗೆ ಆಗಮಿಸಿದ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಅವರನ್ನು ಕೊರಟಗೆರೆ ತಾಲ್ಲೂಕಿನ ವಿವಿಧ ದಲಿತಪರ ಸಂಘಟನೆಯ ಮುಖಂಡರು ಹಾಗೂ ಮಾದಿಗ ಸಮುದಾಯದ ಮುಖಂಡರು ಸಚಿವರಿಗೆ ಸುವರ್ಣಗಿರಿ ಆಡಳಿತ ಕೇಂದ್ರವಾಗಿಸಿಕೊಂಡು ಸುಮಾರು ೩೦ಕ್ಕೂ ಹೆಚ್ಚು ಹಳ್ಳಿಗಳನ್ನು ೧೭೬೦ ರಲ್ಲಿ ಆಳ್ವಿಕೆ ನಡೆಸಿದ ಮಾದಿಗ ಸಮುದಾಯಕ್ಕೆ ಸೇರಿದ ಕುರಂಗರಾಯನ ಇತಿಹಾಸವನ್ನು ದೇಶ ಹಾಗೂ ರಾಜ್ಯವ್ಯಾಪ್ತಿ ತಿಳಿಸುವ ಸಲುವಾಗಿ ಕುರಂಗರಾಯನ ಪ್ರಾಧಿಕಾರ ಸ್ಥಾಪಿಸುವಂತೆ ಮನವಿ ಸಲ್ಲಿಸಿದರು.


ನಂತರ ಮಾತನಾಡಿದ ಸಚಿವ ಕೆ.ಹೆಚ್.ಮುನಿಯಪ್ಪ, ಸಿದ್ದರಬೆಟ್ಟ ಸೇರಿದಂತೆ ಅಕ್ಕಪಕ್ಕದ ೩೦ಕ್ಕೂ ಹೆಚ್ಚು ಗ್ರಾಮಗಳನ್ನು ಆಳಿದ ನಮ್ಮ ಸಮುದಾಯದ ಅರಸ ಇರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ರಾಜ್ಯ ವ್ಯಾಪ್ತಿ ಕರ್ನಾಟಕ ಮಾದರ ಮಹಾಸಭಾ ಸಂಘಟನೆಯನ್ನು ಗಟ್ಟಿ ಮಾಡಲು ಪ್ರತಿಯೊಬ್ಬರು ಸದಸ್ಯತ್ವ ಮಾಡುವ ಮೂಲಕ ಸಂಘಟನೆ ಬಲಪಡಿಸಿ ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಮಾಜಿ ಶಾಸಕ ಗಂಗಹನುಮಯ್ಯ, ಜಿ.ಪಂ. ಮಾಜಿ ಅಧ್ಯಕ್ಷ ಹುಚ್ಚಯ್ಯ, ದಲಿತ ಮುಖಂಡರಾದ ದಾಡಿ ವೆಂಟಕೇಶ್, ರಾಮಾಂಜಿನಯ್ಯ, ವೀರಕ್ಯಾತರಾಯ, ಶಿವರಾಮು, ಲಕ್ಷ್ಮಿನರಸಯ್ಯ, ವಿಭೂತಿ ಸಿದ್ದಪ್ಪ, ಮುಕುಂದ್, ಸಿದ್ದೇಶ್, ಹನುಮಂತರಾಯ, ರವಿಕುಮಾರ್, ಮಾರುತಿ, ಗೋಪಿ, ಸಿದ್ದಗಂಗಯ್ಯ, ಗಂಗಣ್ಣ ಮತ್ತಿತರರು ಉಪಸ್ಥಿತರಿದ್ದರು.