ಕಳಪೆಮಟ್ಟದ ಆಹಾರ ಪದಾರ್ಥ ಪೂರೈಸುವವರ ವಿರುದ್ಧ ಕ್ರಮಕ್ಕೆ ಮನವಿ

ಕಲಬುರಗಿ,ಜು.4: ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಕಳಪೆಮಟ್ಟದ ಆಹಾರ ಪದಾರ್ಥಗಳನ್ನು ಪೂರೈಕೆ ಮಾಡುತ್ತಿರುವ ಹೊಟೆಲ್‍ಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ
ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆಯಿಂದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು
ಕಲಬುರಗಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ ಸಾರ್ವಜನಿಕರಿಗೆ ಹೃದಯಾಘಾತ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿವೆ. ಇದಕ್ಕೆ ನಿಖರವಾದ ಕಾರಣಗಳು ತಿಳಿದಿಲ್ಲವಾದರೂ ಸಹ ಸಾರ್ವಜನಿಕರು ಕಲಬುರಗಿ ನಗರದಲ್ಲಿನಹೊಟೆಲ್‍ಗಳು, ಬೀದಿಬದಿಯ ಬಂಡಿಗಳು ಹಾಗೂ ಕುರುಕಲು ತಿಂಡಿಗಳ ಮೇಲೆ ಅವಲಂಬಿತರಾಗಿದ್ದಾರೆ.ಬಹುತೇಕ ಹೊಟೆಲ್‍ಗಳು ಮತ್ತು ಬೀದಿಬದಿಯ ಬಂಡಿಗಳು ಅಡುಗೆ ಮಾಡಲು ಬಳಸುವ ಸಾಮಗ್ರಿಗಳು, ತರಕಾರಿ, ಎಣ್ಣೆ ಮುಂತಾದ ಅಗತ್ಯವಸ್ತುಗಳು ಕೆಮಿಕಲ್ ಮಿಶ್ರಿತವಾಗಿರುತ್ತದೆ. ಕಡಿಮೆ ಬೆಲೆಯ ಸಾಮಾನುಗಳನ್ನು ತಂದು ಹೆಚ್ಚಿನ ಆದಾಯ ಮಾಡುವ ಭರದಲ್ಲಿ ಹೊಟೆಲ್ ಮಾಲೀಕರು ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಆದರೆ ಈ ಕುರಿತು ಯಾರು ತಲೆಕೆಡಿಸಿಕೊಳ್ಳುತ್ತಿಲ್ಲ.ಈ ಎಲ್ಲ ವಿಷಯಗಳನ್ನು ಸಂಬಂಧಪಟ್ಟ ಅಧಿಕಾರಿಗಳು ತಿಳಿದರೂ ಸಹ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಸಾರ್ವಜನಿಕರು ಸೇವಿಸುವ ಆಹಾರದ ಗುಣಮಟ್ಟವನ್ನು ಪರೀಕ್ಷೆ ಮಾಡುವ ಗೋಜಿಗೆ ಹೋಗುತ್ತಿಲ್ಲ.
ಆದ್ದರಿಂದ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕಳಪೆಮಟ್ಟದಿಂದ ಆಹಾರ ಪೂರೈಕೆ ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಕೈಗೊಂಡು ಸಾರ್ವಜನಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಒಂದು ವೇಳೆ ಈ ವಿಷಯದ ಕುರಿತು ನಿರ್ಲಕ್ಷಿಸಿದರೆ,ಉಗ್ರವಾದ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸಂದೀಪ ಭರಣಿ ಮತ್ತು ವೇದಿಕೆ ಪದಾಧಿಕಾರಿಗಳು ಉಪಸ್ಥಿತರಿದ್ದರು