ಕಲಬುರಗಿ:ಅ.15:ಸರಕಾರಿ, ಖಾಸಗಿ ಹಾಗೂ ಅನುದಾನಿತ ಪದವಿ ಮಹಾವಿದ್ಯಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧ್ಯಾಪಕರಿಗೆ ಮೌಲ್ಯಮಾಪನ ಭತ್ಯೆಗಳನ್ನು ಹಲವಾರು ವರ್ಷಗಳಿಂದ ಹೆಚ್ಚಿಸದೇ ಅನಗತ್ಯ ವಿಳಂಭ ಮಾಡುತ್ತಿರುವ ಗುಲಬರ್ಗಾ ವಿಶ್ವವಿದ್ಯಾಲಯದ ಕ್ರಮವನ್ನು ಹೈದ್ರಾಬಾದ ಕರ್ನಾಟಕ ಸರಕಾರಿ ಕಾಲೇಜು ಅಧ್ಯಾಪಕರ ಸಂಘವು ತೀವ್ರವಾಗಿ ಖಂಡಿಸುತ್ತದೆ. ಆರ್ಥಿಕ ಸುಧಾರಣೆ ಮತ್ತು ಹಣಕಾಸಿನ ಕೊರತೆಯ ನೆಪದಲ್ಲಿ ಮೌಲ್ಯಮಾಪನ ಭತ್ಯೆ ಕಡಿತಗೊಳಿಸಿರುವುದು ಅಧ್ಯಾಪಕರ ವಿರೋಧಿಯಾಗಿದೆ. ಅಧ್ಯಾಪಕರಿಗೆ ಮೌಲ್ಯಮಾಪನ ಭತ್ಯೆ ನಿಗಧಿಗೊಳಿಸುವಾಗ ಸರಕಾರದ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸದೇ ಇರುವುದರಿಂದ ಕಾಲೇಜು ಅಧ್ಯಾಪಕರು ಪರದಾಡುವಂತ ಪರಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ವಿಶ್ವವಿದ್ಯಾಲಯವು ಅಧ್ಯಾಪಕರನ್ನು ಆರ್ಥಿಕವಾಗಿ ಶೋಷಣೆ ಮಾಡುತ್ತಿದೆ. ಏಕೆಂದರೆ ವಿಶ್ವವಿದ್ಯಾಲಯವು ಮಾಡಿದ ತಪ್ಪಿಗೆ ಅಧ್ಯಾಪಕರು ಶಿಕ್ಷೆ ಅನುಭವಿಸುವಂತಾಗಿದೆ. ಸದ್ಯದ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಬೆಲೆಗಳು ನಿರಂತರವಾಗಿ ಹೆಚ್ಚಾಗುತ್ತಿದ್ದು, ಬೆಲೆ ಏರಿಕೆಗೆ ಅನುಗುಣವಾಗಿ ಮೌಲ್ಯಮಾಪಕರ ದಿನ ಭತ್ಯೆಗಳನ್ನು ಹೆಚ್ಚಿಸದೇ ಇರುವುದು ಅವೈಜ್ಞಾನಿಕ ಅಷ್ಟೇ ಅಲ್ಲ ಅಪ್ರಜಾಸತ್ತಾತ್ಮಕವಾಗಿದೆ. 2018 ರಿಂದ 2025ರ ವರೆಗೆ ಮೌಲ್ಯಮಾಪನದ ಯಾವುದೇ ಭತ್ಯೆಗಳನ್ನು ಹೆಚ್ಚಿಸಿರಿವುದಿಲ್ಲ. 2018ರಲ್ಲಿ ಹೆಚ್ಚಿಸಿದ್ದ ಅಲ್ಪಸ್ವಲ್ಪ ಭತ್ಯೆಯೂ ಸಹ ಕಡಿತಗೊಳಿಸಿರುವುದು ಉನ್ನತ ಶಿಕ್ಷಣ ವಿರೋಧಿಯಾಗಿದೆ. ಪ್ರೊ.ರಾಜಸಾಬ ನೇತೃತ್ವದ ಸಮಿತಿಯ ಶಿಫಾರಸ್ಸಿನ ಪ್ರಕಾರ ಬೆಲೆ ಏರಿಕೆಗೆ ಅನುಗುಣವಾಗಿ ವಿವಿಧ ಪರೀಕ್ಷಾ ಭತ್ಯೆಗಳನ್ನು ಪ್ರತಿವರ್ಷ ಪರಿಷ್ಕರಿಸಬೇಕೆಂಬ ನಿಯಮವಿದ್ದರೂ ಸಹ ವಿವಿಧ ಪರೀಕ್ಷಾ ಭತ್ಯೆಗಳನ್ನು ಪರಿಷ್ಕರಿಸದೇ ಕಡಿತಗೊಳಿಸಿ ಮತ್ತೇ ಅದನ್ನೇ ಯಥಾವತ್ತಾಗಿ ವಿಶ್ವವಿದ್ಯಾಲಯವು ಮುಂದುವರೆಸಿರುವುದು ನ್ಯಾಯೋಚಿತವಾದ ಕ್ರಮವಲ್ಲ. ಇದರಿಂದಾಗಿ ಹಲವು ಅರ್ಹ ಹಾಗೂ ಅನುಭವಿ ಅಧ್ಯಾಪಕರು ಮೌಲ್ಯಮಾಪನ ಕಾರ್ಯದಿಂದ ದೂರ ಉಳಿಯುವಂತಾಗಿದೆ. ಗುಲಬರ್ಗಾ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಕಾಲೇಜುಗಳ ಜೊತೆಗೆ ಬೇರೆ ಬೇರೆ ಜಿಲ್ಲೆಗಳಿಂದ ಮೌಲ್ಯಮಾಪನ ಕಾರ್ಯಕ್ಕೆ ಹಾಜರಾಗುವ ಅಧ್ಯಾಪಕರ ಊಟ.ವಸತಿ, ಸಾರಿಗೆ, ಇನ್ನಿತರೆ ಖರ್ಚು-ವೆಚ್ಚಗಳನ್ನು ಭರಿಸಿಕೊಳ್ಳಲು ತಕ್ಷಣವೇ ಮೌಲ್ಯಮಾಪಕರ ದಿನಭತ್ಯೆಗಳನ್ನು ಹೆಚ್ಚಿಸಬೇಕೆಂದು ಹೈದ್ರಾಬಾದ ಕರ್ನಾಟಕ ಸರಕಾರಿ ಕಾಲೇಜು ಅಧ್ಯಾಪಕರ ಸಂಘವು ಒತ್ತಾಯಿಸುತ್ತದೆ. ಇತ್ತೀಚಿಗೆ ಪ್ರಾರಂಭವಾದ ವಿಜಯಪೂರದ ಅಕ್ಕಮಹಾದೇವಿ ವಿಶ್ವವಿದ್ಯಾಲಯದಲ್ಲಿ ಪ್ರತಿದಿನ ಮೌಲ್ಯಮಾಪನ ಮಾಡುವ ಅಧ್ಯಾಪಕರಿಗೆ ದಿನಭತ್ಯೆ ರೂ.1200 ಮತ್ತು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು ದಿನ ಭತ್ಯೆ ರೂ.2300 ನೀಡುತ್ತಿದೆ. ಆದರೆ ಗುಲಬರ್ಗಾ ವಿಶ್ವವಿದ್ಯಾಲಯ ಮಾತ್ರ ರೂ.1100 ನೀಡುತ್ತಿರುವುದು ಯಾವ ನ್ಯಾಯ?. ಈಗಾಗಲೇ ರಾಜ್ಯದ ಇತರೆ ವಿಶ್ವವಿದ್ಯಾಲಯಗಳು ಉದಾ: ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ದಿನಭತ್ಯೆ ರೂ.1300, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ರೂ.1200. ನೀಡುತ್ತಿವೆ. ಹೀಗಾಗಿ ಪದವಿ ಕೋರ್ಸಗಳ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುತ್ತಿರುವ ಅಧ್ಯಾಪಕರಿಗೆ ರೂ. 1500 ಕ್ಕಿಂತಲೂ ಹೆಚ್ಚು ದಿನಭತ್ಯೆಯನ್ನು ನೀಡಿ ಅಧ್ಯಾಪಕರಿಗೆ ಮತ್ತು ಅತಿಥಿ ಉಪನ್ಯಾಸಕರಿಗೆ ಆರ್ಥಿಕವಾಗಿ ಅನುಕೂಲ ಕಲ್ಪಿಸಿಕೊಡಲಾಗಿದೆ. ಆದರೆ, ಗುಲಬರ್ಗಾ ವಿಶ್ವವಿದ್ಯಾಲಯವು ಅಧ್ಯಾಪಕರ ಮೌಲ್ಯಮಾಪನ ಭತ್ಯೆಗಳನ್ನು ಹೆಚ್ಚಿಸದೇ ಅಧ್ಯಾಪಕರ ವಿರೋಧಿ ಧೋರಣೆ ಅನುಸರಿಸುತ್ತಿದೆ.
ಆದ್ದರಿಂದ ಗುಲಬರ್ಗಾ ವಿಶ್ವವಿದ್ಯಾಲಯವೂ ಸಹ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ನಡೆಯುತ್ತಿರುವ ಮೌಲ್ಯಮಾಪನದಿಂದಲೇ ಜಾರಿಗೆ ಬರುವಂತೆ ವಿವಿಧ ಮೌಲ್ಯಮಾಪಕರ ದಿನಭತ್ಯೆ ರೂ.1500, ಹಿರಿಯ ಬಾಹ್ಯ ಮೇಲ್ವಿಚಾರಕರ ರೂ.1400, ಸ್ಕ್ವಾಡ್ ಸದಸ್ಯರಿಗೆ ರೂ.1300, ಕಸ್ಟೋಡಿಯನ್‍ಗಳಿಗೆ ರೂ.1500, ಪ್ರತಿ ಸ್ಕ್ರಿಪ್ಟ್‍ಗೆ ರೂ.25 ಮುಂತಾದ ಮತ್ತಿತರೆ ಪರೀಕ್ಷಾ ಭತ್ಯೆಗಳನ್ನು ಹೆಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಜೊತೆಗೆ ಅಧ್ಯಾಪಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕೆಂದು ಮಾನ್ಯ ಕುಲಪತಿಗಳಲ್ಲಿ ಈ ಮೂಲಕ ಹೈದ್ರಾಬಾದ ಕರ್ನಾಟಕ ಸರಕಾರಿ ಕಾಲೇಜು ಅಧ್ಯಾಪಕರ ಸಂಘವು ಮನವಿ ಮಾಡಿದೆ.
ಅಧ್ಯಾಪಕರ ಸಂಘದ ವಿಭಾಗೀಯ ಅಧ್ಯಕ್ಷರಾದ ಡಾ.ಶರಣಪ್ಪ ಸೈದಾಪೂರ ಅವರ ನೇತೃತ್ವದಲ್ಲಿ ಪದವಿ ಪರೀಕ್ಷೆಯ ಮೌಲ್ಯಮಾಪನವನ್ನು ಕೆಲ ಕಾಲ ಸ್ಥಗಿತಗೊಳಿಸಿ ಶಾಂತಿಯುತವಾಗಿ ಪ್ರತಿಭಟನೆಯ ಮೂಲಕ ಗುಲಬರ್ಗಾ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ.ಶಶಿಕಾಂತ ಉಡಿಕೇರಿ, ಕುಲಸಚಿವರಾದ(ಆಡಳಿತ) ಪ್ರೊ.ರಮೇಶ ಲಂಡನಕರ್,ಮತ್ತು ಮೌಲ್ಯಮಾಪನ ಕುಲಸಚಿವರಾದ ಎನ.ಜಿ.ಕಣ್ಣೂರ ಅವರಿಗೆ ಮನವಿ ಸಲ್ಲಿಸಲಾಯಿತು.,ಡಾ.ಶರಣಪ್ಪ ಸೈದಾಪೂರ, ಡಾ.ಚಿನ್ನಾ ಆಶಪ್ಪ, ,ಡಾ.ಶರಣಪ್ಪ ಗುಂಡಗುರ್ತಿ,ಡಾ.ಜಗದೇವಪ್ಪ ಧರಣಿ,ಡಾ.ಸಂತೋಷ ಹುಗ್ಗಿ, ಡಾ.ಶಂಕರ ಕೊಡದೂರ,ಡಾ.ಚಿತ್ರಶೇಖರ,ಡಾ.ಜೈಪ್ರಕಾಶ ಭಾವಿಮನಿ,ಡಾ.ಗುರುಪ್ರಕಾಶ ಹೂಗಾರ,ಡಾ.ಶರಣಬಸಪ್ಪ ಅವಟೆ, ಡಾ.ಶರಣಪ್ಪ ಭೀಮಪೂರೆ,ಡಾ.ಭಾರತಿ,ಡಾ.ಬಿ.ಆರ್.ಅಣ್ಣಾಸಾಗರ, ಡಾ.ಜ್ಞಾನಮಿತ್ರ ಬೈರಾಮಡಗಿ,ಡಾ.ಶೇಖರ,ಡಾ.ದಯಾನಂದ,ಡಾ.ಮುನಿಯಮ್ಮ,ಡಾ.ವಿಜಯಲಕ್ಷ್ಮಿ ಯಳಸಂಗಿ,ಡಾ.ಸಂಗೀತಾ ಅಷ್ಟಗಿ ಜೊತೆಗೆ ನೂರಾರು ಪ್ರಾಧ್ಯಾಪಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.




























