ವಿಶ್ವದ ಎಲ್ಲಾ ಸಂಸತ್ತುಗಳ ತಾಯಿ ಅನುಭವ ಮಂಟಪ

ಕಲಬುರಗಿ:ಅ.4:12ನೇ ಶತಮಾನದಲ್ಲಿ ಎಲ್ಲಾ ಜಾತಿ, ವರ್ಗ ಮತ್ತು ಧರ್ಮದ ಶರಣರು ಸೇರುತ್ತಿದ್ದ ಅನುಭವ ಮಂಟಪವು ವಿಶ್ವದ ಎಲ್ಲಾ ದೇಶಗಳ ಸಂಸತ್ತುಗಳ ತಾಯಿಯಾಗಿದೆ ಎಂದು ಶರಣಬಸವೇಶ್ವರ ದೇವಸ್ಥಾನ ಆವರಣದ ಶಾಲಾ-ಕಾಲೇಜುಗಳ ನಿರ್ದೇಶಕರಾದ ಡಾ.ನೀಲಾಂಬಿಕಾ ಪೊಲೀಸ್‍ಪಾಟೀಲ ಹೇಳಿದರು.
ಅಖಿಲ ಭಾರತ ಶಿವಾನುಭವ ಮಂಟಪ ಶರಣಬಸವೇಶ್ವರ ದೇವಸ್ಥಾನದಲ್ಲಿ ರವಿವಾರ ಶ್ರಾವಣ ಮಾಸದ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಕರ್ನಾಟಕದ ಸಾಂಸ್ಕøತಿಕ ನಾಯಕ ಬಸವಣ್ಣನವರ ವಿಷಯದ ಶೀರ್ಷಿಕೆ ಅಡಿಯಲ್ಲಿ ಬಸವಣ್ಣನವರು ಮತ್ತು ಅನುಭವ ಮಂಟಪ ಎಂಬ ವಿಷಯ ಕುರಿತು ಮಾತನಾಡಿದರು.
ಮ್ಯಾಥ್ಯೂವ್ ಅರ್ನಾಲ್ಡ್ ಹೇಳುವಂತೆ ವಿಶ್ವದ ಪ್ರಥಮ ಸಂಸತ್ತು ಅನುಭವ ಮಂಟಪ, ಬಸವಣ್ಣನವರು ಪ್ರಥಮ ವಿಚಾರವಾದಿ ಎನ್ನುವ ಅವರ ಮಾತು ಸತ್ಯವಾಗಿದೆ. ಬಸವಣ್ಣನವರು ಐತಿಹಾಸಿಕ ಮಹಾಪುರುಷರು ಅವರು ಮಾಡಿದ ಎಲ್ಲ ಕಾರ್ಯಗಳು ಐತಿಹಾಸಿಕ ಸತ್ಯಗಳಾಗಿವೆ. ಅನುಭವ ಮಂಟಪ, ಮಹಾಮನೆ, ಪರುಷಕಟ್ಟೆ ಇವು ಬಸವಣ್ಣನವರು ಅಂದು ಕಲ್ಯಾಣದಲ್ಲಿ ಸ್ಥಾಪಿಸಿದ ಐತಿಹಾಸಿಕ ನೆಲೆಗಳು. ಇವು ಮೂರು ಗುರು-ಲಿಂಗ-ಜಂಗಮದ ಸ್ವರೂಪಗಳಾಗಿವೆ. ಅನುಭವ ಮಂಟಪ ಗುರುವಾಗಿ ಅಜ್ಞಾನ ಅಳಿಸಿ ಸುಜ್ಞಾನ ಕೊಟ್ಟರೆ, ಮಹಾಮನೆ ಲಿಂಗವಾಗಿ ಸಮಾನತೆ ತತ್ವ ಎತ್ತಿ ಹಿಡಿದು ಇಷ್ಟಲಿಂಗ, ಪ್ರಸಾದ ಮಹತ್ವ ತೋರಿಸಿಕೊಟ್ಟಿತು. ಪುರುಷಕಟ್ಟೆ ಜಂಗಮವಾಗಿ ನಿರ್ಗತಿಕರ, ಬಡವರ ದುಃಖ ದುಮ್ಮಾನ ಅಳಿಸಿ ಅವರನ್ನ ಕಾಯಕಧಾರಿಗಳಾಗಿಸಿ ಅವರಲ್ಲಿ ನಾಡ ಪ್ರೇಮ ಹೆಚ್ಚಿಸಿತು. ಮಾನವನೊಳಗಿನ ಎಲ್ಲ ಮದಗಳನ್ನು ಅಳಿಸಿ ಅರಿವನ್ನು ಕೊಟ್ಟು ಅವರನ್ನು ಮಹಾಂತರನ್ನಾಗಿ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅನುಭವ ಮಂಟಪದ ಕರ್ತೃ ಬಸವಣ್ಣನವರು. ಅವರು ಜನರೊಳಗಿನ ಭಯ, ಕೀಳರಿಮೆ ಭಾವನೆಗಳನ್ನು ಕಿತ್ತೊಗೆದು ಅವರಿಗೆ ವಿಚಾರ ಮಾಡುವ, ಮಾತನಾಡುವ, ಬರೆಯುವ ಸ್ವಾತಂತ್ರ್ಯ ಕಲ್ಪಿಸಬೇಕಾಗಿತ್ತು. ಅರಿವು ಒದಗಿಸಿಕೊಡಬೇಕೆನ್ನುವ ಸಂಕಲ್ಪ ಮಹಾದಾಶೆಯಾಗಿತ್ತು. ಹೀಗಾಗಿ ಅನುಭವ ಮಂಟಪ ಸ್ಥಾಪಿಸಿದರು. ನೀಲಾಂಬಿಕೆ ತನ್ನೊಂದು ವಚನದಲ್ಲಿ ” ಚೆನ್ನಬಸವಣ್ಣನೆಂಬ ಪ್ರಸಾದಿ ಪಡೆದು ಅನುಭವ ಮಂಟಪವನ್ನು ಕಟ್ಟಿ ಅನುಭವ ಮೂರ್ತಿಯಾದನು ನಮ್ಮ ಬಸವಯ್ಯನು” ಎಂದು ಹೇಳುತ್ತಾರೆ. ಈ ಮಾತಿಗೆ ಅನೇಕ ಜನಪದ ನುಡಿಗಳು ಸಾಕ್ಷಿಗಳಿವೆ. ಈ ಅನುಭವ ಮಂಟಪದ ಘೋಷ ವಾಕ್ಯ ‘ಅರಿವೆ ಗುರು’ ಇದರ ಮುಖ್ಯ ತತ್ವಗಳು ಸ್ವಾತಂತ್ರ್ಯ, ಸಮಾನತೆ ಮತ್ತು ಸೌಹಾರ್ದತೆಯಾಗಿದೆ. ಇದರ ಮುಖ್ಯ ಗುರಿಗಳು ಭಕ್ತಿ, ಶಕ್ತಿ ಮತ್ತು ಮುಕ್ತಿ. ಅನುಭವ ಮಂಟಪದ ಫಲಶೃತಿಗಳೆಂದರೆ ಕನ್ನಡ ಭಾಷೆಗೆ ಅಮರತ್ವವನ್ನು ತಂದು ಕೊಟ್ಟಿತು. ಕನ್ನಡ ಸಾಹಿತ್ಯದ ಹಿರಿಮೆ ಗರಿಮೆ ಜಗತ್ತಿಗೆ ಎತ್ತಿತೋರಿಸಿತು. ಈ ಅನುಭವ ಮಂಟಪದ ಮೂಲಕ ಅರಿವನ್ನು ಸಂಪಾದಿಸಿ ಆಚಾರವನ್ನು ಅಂಗಗೊಳಿಸಿ 770 ಅಮರಗಣಂಗಳನ್ನು ಅನುಭವ ಮೂರ್ತಿಗಳನ್ನಾಗಿ ಮಾಡಿದರು ಬಸವಣ್ಣ. ಹೀಗಾಗಿ ಅನುಭವ ಮಂಟಪ ಇಡೀ ವಿಶ್ವ ಗುರುವಿನ ಸ್ಥಾನದಲ್ಲಿ ನಿಂತು ಅದರ ಸಂಸ್ಥಾಪಕರಾದ ಬಸವಣ್ಣನವರು ವಿಶ್ವಗುರು ಎನಿಸಿಕೊಳ್ಳುತ್ತಾರೆ ಎಂದು ಹೇಳಿದರು. ನಂತರ ಸಂಚಾಲಕ ಡಾ.ಶಿವರಾಜಶಾಸ್ತ್ರಿ ಹೇರೂರ್ ಮಾತನಾಡಿದರು.