Home ಜಿಲ್ಲೆ ಬರಗಾಲದ ಸಂಕಷ್ಟದ ನಡುವೆ ರೈತರಿಗೆ ಮತ್ತೊಂದು ಆಘಾತ: ಆಣದೂರದಲ್ಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗೆ...

ಬರಗಾಲದ ಸಂಕಷ್ಟದ ನಡುವೆ ರೈತರಿಗೆ ಮತ್ತೊಂದು ಆಘಾತ: ಆಣದೂರದಲ್ಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗೆ ಆಹುತಿ

ಬೀದರ್: ಈಗಾಗಲೇ ಬರಗಾಲದ ಪರಿಸ್ಥಿತಿಯಿಂದ ಸಂಕಷ್ಟ ಎದುರಿಸುತ್ತಿರುವ ರೈತರಿಗೆ ವಿದ್ಯುತ್ ಅವಘಡದಿಂದ ಮತ್ತೊಂದು ಆಘಾತ ಎದುರಾಗಿದೆ. ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಆಣದೂರ ಗ್ರಾಮದ ರೈತ ವಿಠಲ ರೆಡ್ಡಿ ಅವರ ಜಮೀನಿನಲ್ಲಿ ವಿದ್ಯುತ್ ಅವಘಡದಿಂದ ಬೆಂಕಿ ತಗುಲಿ ಸುಮಾರು 6 ಎಕರೆ ಕಬ್ಬಿನ ಬೆಳೆ ಹಾನಿಗೊಳಗಾಗಿದೆ.

ಘಟನೆಯ ಹಿನ್ನೆಲೆಯಲ್ಲಿ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಹಾನಿಗೊಳಗಾದ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಬೆಳೆ ಹಾನಿಯ ಪ್ರಮಾಣ ಹಾಗೂ ಅವಘಡಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಮಾಹಿತಿ ಪಡೆದು, ಸಮಗ್ರ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಈಗಾಗಲೇ ಬರಗಾಲದ ಪರಿಣಾಮವಾಗಿ ಕೃಷಿ ಚಟುವಟಿಕೆಗಳಲ್ಲಿ ಹಲವು ಸವಾಲುಗಳನ್ನು ಎದುರಿಸುತ್ತಿರುವ ರೈತರಿಗೆ, ಕಷ್ಟಪಟ್ಟು ಬೆಳೆದ ಕಬ್ಬಿನ ಬೆಳೆ ಬೆಂಕಿಗೆ ಆಹುತಿಯಾಗಿರುವುದು ಆರ್ಥಿಕ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ಕೃಷಿಗಾಗಿ ಮಾಡಿದ ಹೂಡಿಕೆ ಹಾಗೂ ರೈತರ ಪರಿಶ್ರಮಕ್ಕೆ ಇಂತಹ ಅವಘಡಗಳಿಂದ ಹಾನಿಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.

ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಇಗಾಗಲೇ ಉಡಬನಳ್ಳಿ, ಖಾಶೆಂಪುರ, ಆಣದೂರ ಗ್ರಾಮ ಸೇರಿ ಸುಮಾರು 20 ಎಕರೆ ಕಬ್ಬು ಸುಟ್ಟಿದ್ದು ದುಃಖದ ಸಂಗತಿ.

ಜಮೀನುಗಳಲ್ಲಿ ಕೆಳಮಟ್ಟದಲ್ಲಿರುವ ವಿದ್ಯುತ್ ತಂತಿಗಳ ದುರಸ್ತಿಗೆ ಸೂಚನೆ

ಆಣದೂರ ಗ್ರಾಮದಲ್ಲಿ ವಿದ್ಯುತ್ ಅವಘಡದಿಂದ ಕಬ್ಬಿನ ಬೆಳೆ ಹಾನಿಗೊಳಗಾದ ಹಿನ್ನೆಲೆಯಲ್ಲಿ, ಕ್ಷೇತ್ರದ ವಿವಿಧ ಗ್ರಾಮಗಳ ಕೃಷಿ ಜಮೀನುಗಳಲ್ಲಿ ರೈತರಿಗೆ ಕೈಗೆಟುಕುವಷ್ಟು ಕೆಳಮಟ್ಟದಲ್ಲಿ ಹಾದುಹೋಗಿರುವ ವಿದ್ಯುತ್ ತಂತಿಗಳ ಬಗ್ಗೆಯೂ ಶಾಸಕರು ಗಮನ ಹರಿಸಿದರು. ಇಂತಹ ವಿದ್ಯುತ್ ತಂತಿಗಳು ರೈತರ ಜೀವಕ್ಕೆ ಹಾಗೂ ಬೆಳೆಗಳಿಗೆ ಅಪಾಯ ಉಂಟುಮಾಡುವ ಸಾಧ್ಯತೆ ಇರುವುದರಿಂದ, ಸಂಬಂಧಪಟ್ಟ ಅಧಿಕಾರಿಗಳು ಕ್ಷೇತ್ರದ ವಿವಿಧ ಜಮೀನುಗಳಲ್ಲಿ ಪರಿಶೀಲನೆ ನಡೆಸಿ, ಅಪಾಯಕಾರಿಯಾಗಿ ಕೆಳಮಟ್ಟದಲ್ಲಿರುವ ವಿದ್ಯುತ್ ತಂತಿಗಳನ್ನು ತಕ್ಷಣ ಸರಿಪಡಿಸಬೇಕು ಎಂದು ಸೂಚಿಸಿದರು.

ವಿದ್ಯುತ್ ತಂತಿಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ರೈತರು ಕೃಷಿ ಚಟುವಟಿಕೆ ನಡೆಸುವ ಸಂದರ್ಭದಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಅಪಾಯಕಾರಿ ವಿದ್ಯುತ್ ಸಂಪರ್ಕಗಳನ್ನು ಗುರುತಿಸಿ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಹಾನಿಗೊಳಗಾದ ರೈತರಿಗೆ ಪರಿಹಾರ ಒದಗಿಸಲು ಕ್ರಮಕ್ಕೆ ಒತ್ತಾಯ

ಬರಗಾಲದ ಸಂಕಷ್ಟದ ನಡುವೆ ಇಂತಹ ಅವಘಡಗಳು ರೈತರ ಬದುಕಿನ ಮೇಲೆ ಮತ್ತಷ್ಟು ಪರಿಣಾಮ ಬೀರುತ್ತವೆ. ಹೀಗಾಗಿ ಬೆಳೆ ಹಾನಿಯ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸಮರ್ಪಕವಾಗಿ ಪರಿಶೀಲನೆ ನಡೆಸಿ, ನಿಯಮಾನುಸಾರ ಸೂಕ್ತ ಪರಿಹಾರ ದೊರಕಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಸೂಚಿಸಿದರು.

ರೈತರ ಸಮಸ್ಯೆಗಳಿಗೆ ಸ್ಪಂದಿಸುವುದು ಮತ್ತು ಸಂಕಷ್ಟದ ಸಂದರ್ಭದಲ್ಲಿ ಅವರ ನೆರವಿಗೆ ನಿಲ್ಲುವುದು ತಮ್ಮ ಆದ್ಯತೆಯಾಗಿದೆ. ಆಣದೂರ ಗ್ರಾಮದ ರೈತ ವಿಠಲ ರೆಡ್ಡಿ ಅವರಿಗೆ ಸಂಭವಿಸಿರುವ ಬೆಳೆ ನಷ್ಟದ ಕುರಿತು ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತಂದು, ಸೂಕ್ತ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಸಂಜು ರೆಡ್ಡಿ, ಸಂತೋಷ ಸೋರಳ್ಳಿ, ಶ್ರೀನಿವಾಸ ರೆಡ್ಡಿ, ಸಂತೋಷ ರೆಡ್ಡಿ, ಬಸವರಾಜ ಸಿಂದಬಂದಗಿ, ಬಾಬು ರೆಡ್ಡಿ, ಬಸವರಾಜ ಪಟೋದಿ, ಸಂಗಮೇಶ ಉದಗೀರೆ, ಕಾಶಿನಾಥ ಸೋರಳ್ಳಿ, ನೀಲಕಂಠ ಪಸರ್ಗಿ, ಶಿವಶಂಕರ ಫುಲೆ, ಚೇತನ್ ಸೋರಳ್ಳಿ, ಮಹೇಶ್ ಮಡಿವಾಳ, ವೆಂಕಟರೆಡ್ಡಿ ಜೈಪಾಲ್, ನಾರಾಯಣ ರೆಡ್ಡಿ, ಕಮಲ ರೆಡ್ಡಿ, ಬಾಬು ಕೋರವ, ನಾಗರೆಡ್ಡಿ, ಕಿಶೋರ್, ರಾಜಕುಮಾರ ಗೈಬಾ, ರಾಜಕುಮಾರ, ಮೋಯಿಜ್ ಮತ್ತಿತರರು ಉಪಸ್ಥಿತರಿದ್ದರು.