ಜ್ಞಾನಜ್ಯೋತಿ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆ

ಹುಳಿಯಾರು, ಸೆ. ೨೦- ಸರ್ಕಾರದ ಆದೇಶದಂತೆ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯಿತಿ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಹಿಳಾ ಸ್ವಸಹಾಯ ಸಂಘಗಳನ್ನು ಒಳಗೊಂಡ ಸಂಜೀವಿನಿ ಒಕ್ಕೂಟಗಳನ್ನು ರಚನೆ ಮಾಡಿದ್ದು, ಅವುಗಳ ನಿರ್ವಹಣೆಯನ್ನು ಮಹಿಳಾ ಸದಸ್ಯರೇ ಸೇರಿ ಅಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ, ಉಪಾಧ್ಯಕ್ಷರು, ಸಹ ಕಾರ್ಯದರ್ಶಿ, ಇವರನ್ನು ನೇಮಿಸುವ ಜವಾಬ್ದಾರಿಯನ್ನು ಹೊಂದಿರುತ್ತವೆ ಎಂದು ಚಿಕ್ಕನಾಯಕನಹಳ್ಳಿ ತಾಲ್ಲೂಕು ಪಂಚಾಯ್ತಿ ತಾಲ್ಲೂಕು ಮ್ಯಾನೇಜರ್ ಭರತ್ ತಿಳಿಸಿದರು.


ಹುಳಿಯಾರು ಹೋಬಳಿ ದೊಡ್ಡ ಬಿದರೆ ಗ್ರಾಮದ ಪಾತಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಏರ್ಪಡಿ ಸಿದ್ದ ದೊಡ್ಡಬಿದರೆ ಗ್ರಾಮ ಪಂಚಾಯ್ತಿ ಮಟ್ಟದ ಜ್ಞಾನಜ್ಯೋತಿ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.


ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ಆರ್ಥಿಕ ಸಾಕ್ಷರತಾ ಸಲಹೆಗಾರರಾದ ಆರ್.ಎಂ. ಕುಮಾರಸ್ವಾಮಿ ಮಾತನಾಡಿ, ಕೇವಲ ೧೦-೨೦ ಮಂದಿ ಮಹಿಳೆಯರು ಸೇರಿ ನಡೆಸುತ್ತಿದ್ದ ಸ್ವಸಹಾಯ ಸಂಘಗಳು ಬೃಹದಾಕಾರವಾಗಿ ಬೆಳೆದು ಸರ್ಕಾರದ ಅನುದಾನದಿಂದಲೇ ಈ ಒಕ್ಕೂಟಗಳನ್ನು ರಚಿಸಿ ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕೆಂಬುದೇ ಸರ್ಕಾರದ ಮುಖ್ಯ ಗುರಿಯಾಗಿದೆ ಎಂದು ತಿಳಿಸಿದರು. ಜ್ಞಾನಜ್ಯೋತಿ ಸಂಜೀವಿನಿ ಒಕ್ಕೂಟದ ಎಂ.ಬಿ.ಕೆ. ಲಕ್ಷ್ಮಿ ವಾರ್ಷಿಕ ಸಭೆಯ ಲೆಕ್ಕಪತ್ರಗಳನ್ನು ಮಂಡಿಸಿ ಮಾತನಾಡಿ, ಇನ್ನೂ ಹೆಚ್ಚು ಸಂಘಗಳನ್ನು ಸಂಜೀವಿನಿ ಒಕ್ಕೂಟಕ್ಕೆ ಸೇರ್ಪಡೆ ಮಾಡಿಕೊಂಡು ಮಹಿಳೆಯರನ್ನು ಆರ್ಥಿಕವಾಗಿ ಸಬಲರಾಗಲು ಎಲ್ಲ ರೀತಿಯ ಮಾರ್ಗದರ್ಶನ ನೀಡಲಾಗುವುದು ಎಂದು ತಿಳಿಸಿದರು.


ಜ್ಞಾನಜ್ಯೋತಿ ಸಂಜೀವಿನಿ ಒಕ್ಕೂಟದ ವಾರ್ಷಿಕ ಸಭೆಯಲ್ಲಿ ಒಕ್ಕೂಟದ ಅಧ್ಯಕ್ಷೆ ದ್ರಾಕ್ಷಾಯಿಣಿ, ಕಾರ್ಯದರ್ಶಿ ಅಪ್ಸನ ಖಾನಂ, ಖಜಾಂಚಿ ರಾಧಾ ಟಿ.ಎಲ್. ಸಿಆರ್‌ಪಿಗಳಾದ ಸವಿತಾ, ಇಂದ್ರಮ್ಮ, ಉಪಾಧ್ಯಕ್ಷೆ ಗೌರಮ್ಮ, ಸಹ ಕಾರ್ಯದರ್ಶಿ ಶಿವಮ್ಮ, ಕೃಷಿ ಸಖಿ ಕರಿಯಮ್ಮ ಪಶುಸಖಿ ಜ್ಯೋತಿ ಮತ್ತಿತರರು ಉಪಸ್ಥಿತರಿದ್ದರು.
ಸಭೆಯಲ್ಲಿ ಬಳ್ಳೆಕಟ್ಟೆ, ಪೋಚ್ಕಟ್ಟೆ, ಚಿಕ್ಕಬಿದರೆ, ಕೋಡಿಹಳ್ಳಿ, ಹಾಗೂ ದೊಡ್ಡಬಿದರೆ ಗ್ರಾಮದ ಮಹಿಳಾ ಸದಸ್ಯರು ಭಾಗವಹಿಸಿದ್ದರು.