
ಬೀದರ್ :ಮಾ.೨೬:ತಾಲೂಕಿನ ಕಾಮಠಾಣದಲ್ಲಿರುವ ನೆಹೆಮಿಯಾ ಮೆಮೋರಿಯಲ್ ಶಾಲೆಯಲ್ಲಿ ನೆಹೆಮಿಯಾ ಎಜುಕೇಶನ್ ಸೊಸೈಟಿ ವತಿಯಿಂದ ಆಯೋಜಿಸಲಾದ “ದಿ ಗ್ಲೀ ಗಾಲಾ” ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮ ಮಂಗಳವಾರ ಸಂಜೆ ಅದ್ದೂರಿಯಾಗಿ ನೆರವೇರಿತು. ವಿದ್ಯಾರ್ಥಿಗಳ ವೈವಿಧ್ಯಮಯ ಪ್ರತಿಭೆಗಳ ಅನಾವರಣಗೊಂಡ ಈ ಕಾರ್ಯಕ್ರಮ ಪ್ರೇಕ್ಷಕರ ಮನಸೆಳೆಯಿತು.
ಕಾರ್ಯಕ್ರಮವು ಬಿಲೀವರ್ಸ್ ಚರ್ಚ್ ಪಾಸ್ಟರ್ ರೆವ್. ಸಂಜು ಕುಮಾರ್ ಅವರ ಪ್ರಾರ್ಥನೆಯೊಂದಿಗೆ ಆರಂಭಗೊAಡಿತು. ನೌಬಾದ್ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಮಹೇಶ್ ಗೌಡ ಪಾಟೀಲ್ ಹಾಗೂ ಗಣ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನೆಹೆಮಿಯಾ ಎಜುಕೇಶನ್ ಸೊಸೈಟಿ ಅಧ್ಯಕ್ಷೆ ಶ್ರೀಮತಿ ಇಂದಿರಾ ನೆಹೆಮಿಯಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕುಶಾಲ್ ರಾವ್ ಯಾಬಾ ಮಾತನಾಡಿ, ಗ್ರಾಮೀಣ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಪ್ರೋತ್ಸಾಹ ನೀಡುವುದು ಅತ್ಯಂತ ಮುಖ್ಯವಾಗಿದ್ದು, ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಹೊರತಂದು ಅವರ ಭವಿಷ್ಯವನ್ನು ಉಜ್ವಲಗೊಳಿಸಲು ಸಹಕಾರಿಯಾಗುತ್ತವೆ ಎಂದರು. “ಈ ಕಾರ್ಯಕ್ರಮವು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗಿದೆ,” ಎಂದು ಅವರು ಹೇಳಿದರು.
ಶಾಲೆಯ ಕಾರ್ಯದರ್ಶಿ ಶ್ರೀಮತಿ ಮಿಶೆಲ್ ನೆಹೆಮಿಯಾ ವಾರ್ಷಿಕ ವರದಿ ವಾಚಿಸಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ವೇದಿಕೆಗಳು ಅತ್ಯಂತ ಅಗತ್ಯವಾಗಿದ್ದು, ಇವು ಮಕ್ಕಳ ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯತ್ ಸದಸ್ಯ ಗೌಸುದ್ದೀನ್, ಶ್ರೀಮತಿ ಚಿನಮ್ಮಾ (ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷೆ, ಕಾಮಠಾಣ), ರಾಜು ಧಾಳಿ (ಗ್ರಾಮ ಪಂಚಾಯತ್ ಸದಸ್ಯ, ಮರ್ಜಾಪುರ), ಮಂಜುನಾಥ ಬಾಳೆಬೈ (ಗ್ರಾಮ ಪಂಚಾಯತ್ ಸದಸ್ಯ, ಖಾಶೆಂಪೂರ) ಭಾಗವಹಿಸಿದ್ದರು.
ಇದೇ ವೇಳೆ ಸಾಮಾಜಿಕ ಕಾರ್ಯಕರ್ತರಾದ ಮಾರುತಿ ಯಾಬಾ, ತುಕ್ಕಪ್ಪ, ಕಲ್ಯಾಣರಾವ್, ಉಮೇಶ್ ಯಾಬಾ, ಸಂಜುಕುಮಾರ್ ಗುಮಾಸ್ತೆ, ರಮೇಶ್ ಮರ್ಜಾಪುರೆ, ಅಂಬಾದಾಸ್ ಸೋನಿ,ಶ್ರೀಮತಿ ಮನೀಷಾ ನೆಹೆಮಿಯಾ ಉಪಸ್ಥಿತರಿದ್ದರು.
ಶಾಲೆಯ ವಿದ್ಯಾರ್ಥಿಗಳು ನೃತ್ಯ, ಸಂಗೀತ, ನಾಟಕ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಕಾರ್ಯಕ್ರಮದಲ್ಲಿ ಶಿಕ್ಷಕರು, ಪೋಷಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು.




















