Home ಜಿಲ್ಲೆ ವಿವಿಗಳಲ್ಲಿ ವಿದ್ಯಾರ್ಥಿ ಚುನಾವಣೆ ಘೋಷಣೆ: ಮಾಲಗತ್ತಿ ಹರ್ಷ

ವಿವಿಗಳಲ್ಲಿ ವಿದ್ಯಾರ್ಥಿ ಚುನಾವಣೆ ಘೋಷಣೆ: ಮಾಲಗತ್ತಿ ಹರ್ಷ

ಬೀದರ್:ಮಾ.೯: ರಾಜ್ಯದ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆಯನ್ನು ನಡೆಸಲು ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನು ಸ್ವಾಗತಾರ್ಹ ಎಂದು ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷ ಭೀಮರಾವ ಮಾಲಗತ್ತಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿದ ಅವರು, ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಬೇಕೆಂಬ ಬೇಡಿಕೆಗೆ ಸಂಬAಧಿಸಿ ಹಲವು ವರ್ಷಗಳಿಂದ ಹೋರಾಟ ನಡೆಯುತ್ತಿತ್ತು. ಆ ಹೋರಾಟಕ್ಕೆ ಸ್ಪಂದಿಸಿ ರಾಜ್ಯ ಸರ್ಕಾರ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ಮುಂದಾಗಿರುವುದು ಸಂತೋಷದ ವಿಷಯವಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಲು ಮತ್ತು ಯುವಜನರಲ್ಲಿ ರಾಜಕೀಯ ಜಾಗೃತಿ ಮೂಡಿಸಲು ವಿದ್ಯಾರ್ಥಿ ಚುನಾವಣೆಗಳು ಅತ್ಯಂತ ಅಗತ್ಯವೆಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಯುವ ನಾಯಕತ್ವದ ಅಗತ್ಯತೆಯನ್ನು ವಿಶ್ಲೇಷಿಸಿ ರಾಜ್ಯ ಸರ್ಕಾರಕ್ಕೆ ಸೂಕ್ತ ಸಲಹೆ ನೀಡಿದ್ದರು. ಅದರ ಪರಿಣಾಮವಾಗಿ ೩೩ ವರ್ಷಗಳ ಬಳಿಕ ಹೊಸ ತಲೆಮಾರಿನ ಯುವಕರಲ್ಲಿ ರಾಜಕೀಯ ಪ್ರಜ್ಞೆ ಮೂಡಿಸಲು ರಾಜ್ಯ ಸರ್ಕಾರ ಬಜೆಟ್‌ನಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ತೀರ್ಮಾನಿಸಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರದ ಈ ನಿರ್ಧಾರದಿಂದ ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳು, ಸಂವಿಧಾನದ ಆಶಯಗಳು ಹಾಗೂ ರಾಜಕೀಯ ಇಚ್ಛಾಶಕ್ತಿ ಬೆಳೆಸಲು ಪ್ರೇರಣೆಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಹಿನ್ನೆಲೆಯಲ್ಲಿ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳಿಗೆ ಅವರು ಅಭಿನಂದನೆ ಸಲ್ಲಿಸಿದ್ದಾರೆ.