Home ಜಿಲ್ಲೆ ಶೋಷಿತರ ಧ್ವನಿಯಾಗಿದ್ದ ಅಣ್ಣಾ ಭಾವು ಸಾಠೆ

ಶೋಷಿತರ ಧ್ವನಿಯಾಗಿದ್ದ ಅಣ್ಣಾ ಭಾವು ಸಾಠೆ

ಬೀದರ್: ಸಮಾಜ ಸುಧಾರಕ ಅಣ್ಣಾ ಭಾವು ಸಾಠೆ ಶೋಷಿತರು, ಕಾರ್ಮಿಕರು ಹಾಗೂ ದಲಿತರ ಧ್ವನಿಯಾಗಿದ್ದರು ಎಂದು ರಾಜ್ಯ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಸಂಜಯ್ ಜಾಗೀರದಾರ್ ಹೇಳಿದರು.
ಕಮಲನಗರ ಪಟ್ಟಣದಲ್ಲಿ ಮಾದಿಗ ಸಮಾಜ ವತಿಯಿಂದ ಭಾನುವಾರ ಆಯೋಜಿಸಿದ್ದ ಅಣ್ಣಾ ಭಾವು ಸಾಠೆ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆರಂಭದಲ್ಲಿ ಕಮ್ಯುನಿಸ್ಟರಿಂದ ಪ್ರಭಾವಿತರಾಗಿದ್ದ ಅವರು ನಂತರ ಅಂಬೇಡ್ಕರ್‍ವಾದಿಯಾದರು. ಸಂಯುಕ್ತ ಮಹಾರಾಷ್ಟ್ರ ಚಳವಳಿಗೆ ಶಕ್ತಿ ತುಂಬಿದರು. ಸಾಮಾಜಿಕ ಸಮಾನತೆಗೆ ಶ್ರಮಿಸಿದರು ಎಂದು ತಿಳಿಸಿದರು.
ಹೆಚ್ಚು ಅಕ್ಷರ ಕಲಿಯದಿದ್ದರೂ ಜಗತ್ತು ಮೆಚ್ಚುವಂತಹ ಸಾಹಿತ್ಯ ರಚಿಸಿದರು. ಅವರ ಸಾಹಿತ್ಯ ರಷ್ಯನ್ ಸೇರಿ ವಿವಿಧ ಭಾಷೆಗೆ ಅನುವಾದಗೊಂಡಿರುವುದು ಇದಕ್ಕೆ ನಿದರ್ಶನ ಎಂದರು.
ಭಾರತೀಯ ಸಾಹಿತ್ಯ ಹಾಗೂ ಸಮಾಜಕ್ಕೆ ಅವರ ಕೊಡುಗೆ ಅನನ್ಯವಾಗಿದೆ. ಅವರ ಬದುಕು ಹಾಗೂ ಸಾಧನೆ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ ಎಂದು ತಿಳಿಸಿದರು.
ಮುಖಂಡರಾದ ಸ್ವಾಮಿದಾಸ್ ಕೆಂಪೆನೋರ್, ವೆಂಕಟರಾವ್ ಪಾಟೀಲ, ಜಾನ್ಸನ್ ಧೂಪತ್‍ಮಹಾಗಾಂವ್, ಯೆಶಪ್ಪ ದಾವಿದ್, ವಿಶಾಲ್ ಚೌಹಾಣ್, ದೀಪಕ್ ಸೂರ್ಯವಂಶಿ, ಕೃಷ್ಣ ವಾಘಮಾರೆ, ರಾಜು ಗಾಯಕವಾಡ್, ಸಾಯಿ ಗೌಳಿ, ವಿಶಾಲ್, ಸಾಮ್ರಾಟ್ ಚವಾಣ್, ಮೋಷನ್ ಖಾನ್ ಮತ್ತಿತರರು ಇದ್ದರು.
ಇದಕ್ಕೂ ಮುನ್ನ ಪಟ್ಟಣದ ವಿಶ್ವಾಸ ನಗರದಿಂದ ಬಸವೇಶ್ವರ ವೃತ್ತದವರೆಗೆ ಅಲಂಕೃತ ವಾಹನದಲ್ಲಿ ಅಣ್ಣಾ ಭಾವು ಸಾಠೆ ಅವರ ಭಾವಚಿತ್ರದ ಮೆರವಣಿಗೆ ನಡೆಯಿತು. ನೂರಾರು ಜನ ಪಾಲ್ಗೊಂಡಿದ್ದರು.