
ಕಲಬುರಗಿ:ಜ.೧೧:ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಲಿಕೆಯನ್ನು ಕಡ್ಡಾಯಗೊಳಿಸಲು ಮುಂದಾಗಿರುವುದನ್ನು ಕನ್ನಡ ಭೂಮಿ ಜಾಗೃತಿ ಸಮಿತಿಯ ಉತ್ತರ ಕರ್ನಾಟಕ ವಕ್ತಾರ ಆನಂದ ತೆಗನೂರ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು,
ಭಾಷೆ ವಿಚಾರದಲ್ಲಿ ಕೇರಳ ಸರಕಾರದ ಕ್ರಮ ಸರಿಯಲ್ಲ. ಕೇರಳದಲ್ಲಿ ೮ ಲಕ್ಷಕ್ಕೂ ಅಧಿಕ ಕನ್ನಡಿಗರಿದ್ದಾರೆ. ಮಲಯಾಳಂ ಕಡ್ಡಾಯ ಮಾಡಿದರೆ ಕನ್ನಡಿಗರನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.ಗಡಿ ಭಾಗದ ಅಲ್ಪಸಂಖ್ಯಾತರ ಹಕ್ಕಿಗೆ ಧಕ್ಕೆ ಆಗದಂತೆ ಕರ್ನಾಟಕ ಸರಕಾರ ಶೀಘ್ರ ಕ್ರಮ ಕೈಗೊಳ್ಳಬೇಕು,” ಎಂದು ಅವರು ಆಗ್ರಹಿಸಿದರು.ಈ ಹಿಂದೆ ಕೇರಳದ ವಿಧಾನಸಭೆಯಲ್ಲಿ ೨೦೧೭ರಲ್ಲೂ ಈ ಮಸೂದೆಯನ್ನ ತಂದಿದ್ದರು, ಆವಾಗಲೂ ಕೇರಳ ರಾಜ್ಯದವರಿಗೆ ಸಂಪೂರ್ಣವಾಗಿ ಜಯ ಸಿಗಲಿಲ್ಲ, ಮಲಯಾಳಂ ಕಡ್ಡಾಯಗೊಳಿಸುವ ವಿಚಾರ ಕನ್ನಡಿಗರಿಗೆ ತದ್ವಿರುದ್ಧವಾಗಿದೆ ಎಂದು ಅವರು ಕಿಡಿಕಾರಿದರು.

























