Home ಜಿಲ್ಲೆ ಕಲಬುರಗಿ ನೇಕಾರ ಉಪಪಂಗಡಗಳ ಕುಲಶಾಸ್ತ್ರೀಯ ಅಧ್ಯಯನದ ಸಂದರ್ಶನ

ನೇಕಾರ ಉಪಪಂಗಡಗಳ ಕುಲಶಾಸ್ತ್ರೀಯ ಅಧ್ಯಯನದ ಸಂದರ್ಶನ

ಕಲಬುರಗಿ:ಜೂ.20: ರಾಜ್ಯದಲ್ಲಿನ ನೇಕಾರ ಮತ್ತು ಉಪಪಂಗಡಗಳ ಕುಲಶಾಸ್ತ್ರೀಯ ಅಧ್ಯಯನದ ಸಂದರ್ಶನ ಆರಂಭವಾಗಿದ್ದು, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ಮಾನವಶಾಸ್ತ್ರ ವಿಭಾಗದವರು ಮತ್ತು ದೇವರಾಜ ಅರಸ ಹಿಂದುಳಿದ ವರ್ಗಗಳ ಇಲಾಖೆಯ ರಾಜ್ಯ ಮಟ್ಟದ ಯೋಜನಾ ವರದಿ ತಂಡದ ಸದಸ್ಯರು ಕಲಬುರಗಿ ಜಿಲ್ಲೆಗೆ ಆಗಮಿಸಿ ನೇಕಾರ ಮುಖಂಡರನ್ನು ಭೇಟಿಯಾಗಿ, ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹ ಮಾಡಿದರು.
ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ಮಾನವಶಾಸ್ತ್ರ ವಿಭಾಗದ ಯೋಜನಾ ನಿರ್ದೇಶಕ ಟಿ.ಟಿ.ಬಸವನಗೌಡ ನೇತೃತ್ವದಲ್ಲಿ ಸಂಶೋಧನಾ ಸಹಾಯಕರಾದ ಡಾ.ಶ್ರೀಕಾಂತ ನಾಯಕ, ಡಾ.ಬಸವರಾಜ, ದತ್ತಾಂಶ ಸಂಗ್ರಹಕಾರರಾದ ಸೋಮಲಿಂಗ ಬೆನ್ನೂರ, ಕೌಶಲ್ಯ ಗದ್ದಿಗೌಡರ್, ಕಾವೇರಿ ಅಜ್ಜನವರ್, ಶೃತಿ ಕಮತರ್ ಅವರು ನಾಲ್ಕು ದಿನಗಳ ಕಾಲ ಕಲಬುರಗಿ ಜಿಲ್ಲೆಯ ನೇಕಾರ ಉಪಪಂಗಡಗಳ ಕುಲಶಾಸ್ತ್ರೀಯ ಅಧ್ಯಯನ ಮಾಡಲಿದ್ದಾರೆ.
ಕಲಬುರಗಿ ಜಿಲ್ಲಾ ಹಟಗಾರ ಸಮಾಜ ಸಂಘದ ಅಧ್ಯಕ್ಷ ಶ್ರವಣಕುಮಾರ ಮುನ್ನೋಳ್ಳಿ ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಮುನ್ನೋಳ್ಳಿ ಹಾಗೂ ಪದಾಧಿಕಾರಿಗಳು ತಂಡದವರನ್ನು ಬರಮಾಡಿಕೊಂಡು ಹಟಗಾರ ಸಮಾಜದ ಸಮಗ್ರ ಮಾಹಿತಿ ನೀಡುವಲ್ಲಿ ನೆರವಾದರು. ಉಪಪಂಗಡದ ಪರಿಚಯ, ಉಗಮ ಮತ್ತು ಇತಿಹಾಸ, ಮಾತೃಭಾಷೆ, ಒಟ್ಟು ಕುಟುಂಬಗಳ ಸಂಖ್ಯೆ, ಒಟ್ಟು ಜನಸಂಖ್ಯೆ, ವಿವಾಹ ಸಂಬಂಧಗಳು, ಮೂಲ ವೃತ್ತಿ, ಕುಲಕಸುಬು, ಆರ್ಥಿಕ ಸ್ಥಿತಿಗತಿ, ಶೈಕ್ಷಣಿಕ ಮಾಹಿತಿ, ಕುಲದೇವರು, ಕುಲಚಿಹ್ನೆಗಳು, ಆಹಾರ ಪದ್ಧತಿ, ವೈದ್ಯಪದ್ಧತಿ, ಕುಲಕಸುಬು ಆಧಾರಿತ ಕಾಯಿಲೆಗಳು, ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಲಭ್ಯತೆ, ಅಂಗವಿಕಲತೆಯ ಮಾಹಿತಿ, ಆಚರಣೆಗಳು, ಸಾಮಾಜಿಕ ಕಟ್ಟುಪಾಡುಗಳು, ಪ್ರಸೂತಿ ವಿಧಾನ ಮಾಹಿತಿ, ಸೂಲಗಿತ್ತಿಯರ ಪಾತ್ರ, ಸಾಹಿತಿಗಳು, ಕಲಾವಿದರುಗಳ, ಕ್ರೀಡಾಪಟುಗಳ ಮಾಹಿತಿ, ಸರ್ಕಾರದ ಸೌಲಭ್ಯಗಳು, ರಾಜಕೀಯ ಸ್ಥಾನಮಾನ, ಒಟ್ಟಿನಲ್ಲಿ ಆರ್ಥಿಕ, ಶೈಕ್ಷಣಿಕ, ರಾಜಕೀಯ ಮತ್ತು ಆರೋಗ್ಯ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಕಲಬುರಗಿ ಜಿಲ್ಲಾ ಹಟಗಾರ ಸಮಾಜ ಸಂಘದ ಪದಾಧಿಕಾರಿಗಳಾದ ಸೂರ್ಯಕಾಂತ ಸೊನ್ನದ, ಸೋಮಶೇಖರ ಧುತ್ತರಗಿ, ಬಸವರಾಜ ಕನಕಾ, ಸತೀಶ ಜಮಖಂಡಿ, ಚಂದ್ರಪ್ಪ ಬುಕ್ಕಾ, ಶಿವಲಿಂಗಪ್ಪ ಆಲಮದ, ಸಂಗಮನಾಥ ರೇವತಗಾಂವ, ಶಿವರಾಜ ಕನಕಾ, ರಾಜಶೇಖರ ಮುನ್ನೋಳ್ಳಿ, ರಾಜು ಕೋಷ್ಠಿ, ರಾಚಪ್ಪ ಚಂದಾ, ಮಲ್ಲಿಕಾರ್ಜುನ ಅಕ್ಕಾ, ಅಶೋಕ ಜೇವೂರ, ಶಿವಪುತ್ರಪ್ಪ ಭಾವಿ, ಮಲ್ಲಿಕಾರ್ಜುನ ಹೊಸಮನಿ, ಶಿವಶರಣಪ್ಪ ಮುಂಡರಕಿ, ಚಂದ್ರಶೇಖರ ಮ್ಯಾಳಗಿ, ಚನ್ನಮಲ್ಲಪ್ಪ ಯಳಸಂಗಿ, ಚನ್ನಮಲ್ಲಪ್ಪ ನಿಂಬೇಣಿ ಮುಂತಾದವರಿದ್ದರು.