ಸಚಿವ ಸಂಪುಟದಲ್ಲಿ ಕೋಲಿ ಸಮಾಜದ ನಾಯಕ ಕಮಕನೂರರಿಗೆ ಸೂಕ್ತಸ್ಥಾನ ಮಾನ ನೀಡಲು ಅಮೃತ ಡಿಗ್ಗಿ ಆಗ್ರಹ

ಕಲಬುರಗಿ,ಡಿ.16- ಕರ್ನಾಟಕ ರಾಜ್ಯದಲ್ಲಿ ಎಸ್.ಎಂ. ಕೃಷ್ಣ ಸರ್ಕಾರದ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಹಾಗೂ ಬಿಜೆಪಿ ಸರ್ಕಾರಗಳು ಕೋಲಿ ಕಬ್ಬಲಿಗ ಸಮುದಾಯಕ್ಕೆ ಸಮಾಜಿಕನ್ಯಾಯ ಕಲ್ಪಿಸುವಲ್ಲಿ ವಿಫಲವಾಗಿದ್ದು, ಉದ್ದೇಶಪೂರ್ವಕವಾಗಿ ರಾಜಕೀಯ ಸ್ಥಾನಮಾನ ನೀಡದೇ ಹಿಂದದುಳಿದ ಈ ಸಮಾಜವನ್ನು ಕಡೆಗಣಿಸಲಾಗುತ್ತಿದೆ ಎಂದು ಕಲ್ಯಾಣ ಕರ್ನಾಟಕ ಕೋಲಿ ಗಂಗಾಮತ ಸಮಾಜದ ಅಧ್ಯಕ್ಷ ಅಮೃತ ಎಚ್. ಡಿಗ್ಗಿ ಅವರು ಆಕ್ರೋಷ ವ್ಯಕ್ತಪಡಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ನಂತರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಹಿಂದಿನ ಬಹುತೇಕ ಸರ್ಕಾರಗಳು ಕೋಲಿ ಕಬ್ಬಲಿಗ ಸಮುದಾಯಕ್ಕೆ ಸಚಿವ ಸ್ಥಾನ ನೀಡುತ್ತಿದ್ದವು. ಆದರೆ ಇತ್ತೀಚಿನ ಸರ್ಕಾರಗಳು ಈ ಸಮುದಾಯದ ನಾಯಕರಿಗೆ ಸಚಿವ ಸ್ಥಾನ ನೀಡದೆ ಉದ್ದೇಶಪೂರ್ವಕವಾಗಿ ಸಮಾಜವನ್ನು ನಿರ್ಲಕ್ಷ್ಯ ಮಾಡುತ್ತಿವೆ ಎಂದ ಅವರು, ಪ್ರಸ್ತುತ ರಾಜ್ಯದ ಕಾಂಗ್ರೆಸ್ ನೆತೃತ್ವದ ಸರ್ಕಾರದÀಲ್ಲಿ ಕೋಲಿ ಕಬ್ಬಲಿಗ ಸಮಾಜಕ್ಕೆ ಸಚಿವ ಸ್ಥಾನ ನೀಡದಿರುವುದನ್ನು ಸಮಾಜ ಬಲವಾಗಿ ಖಂಡಿಸುತ್ತದೆ ಎಂದರು.
ಕಲಬುರಗಿ ಜಿಲ್ಲೆಯ ಹಲವು ಮತಕ್ಷೇತ್ರಗಳಲ್ಲಿ ಕೋಲಿ ಕಬ್ಬಲಿಗ ಸಮಾಜದ ಜನಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದ್ದು, ಇಂತಹ ಕ್ಷೇತ್ರಗಳನ್ನು ಎಸ್‍ಸಿ/ಎಸ್‍ಟಿ ಮೀಸಲಾತಿಗೆ ಒಳಪಡಿಸುವ ಮೂಲಕ ಸಮುದಾಯದ ಅಭ್ಯರ್ಥಿಗಳು ಸ್ಪರ್ಧಿಸುವ ಅವಕಾಶ ಕಳೆದುಕೊಂಡಿದ್ದಾರೆ. ಮತ್ತು ಕೆಲವು ಕ್ಷೇತ್ರಗಳಲ್ಲಿ ಗೆಲ್ಲುವ ಸಾಮಥ್ರ್ಯ ಇದ್ದರೂ ಟಿಕೆಟ್ ನೀಡದೇ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಡಿಗ್ಗಿ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಕೋಲಿ ಸಮಾಜದ ಪ್ರಭಾವಿ ಮತ್ತು ಹಿರಿಯ ನಾಯಕರಾದ ತಿಪ್ಪಣ್ಣಪ್ಪ ಕಮಕನೂರ ಅವರಿಗೆ ಕಾಂಗ್ರೆಸ ಪಕ್ಷವು ಸೂಕ್ತ ಸ್ಥಾನ ಮಾನ ನೀಡುತ್ತಿಲ್ಲ, ಅವರನ್ನು ವಿಧಾಣ ಪತಿಷತ್ತಿಗೆ ಮಾತ್ರ ಸೀಮಿತಗೊಳಿಸದೇ ಸಚಿವ ಸ್ಥಾನಮಾನ ನೀಡುವ ಮೂಲಕ ರಾಜ್ಯದ ಕೋಲಿ ಸಮಾಜಕ್ಕೆ ಸಮಾಜಿಕ ನ್ಯಾಯ ಕಲ್ಪಿಸಬೇಕು ಒಂದು ವೇಳೆ ಸಚಿವ ಸ್ಥಾನ ನೀಡದಿದ್ದಲ್ಲಿ ಕೋಲಿ ಸಮಾಜ ಬೀದಿಗಿಳಿದು ಕಾಂಗ್ರೆಸ ಪಕ್ಷದ ವಿರುದ್ಧ ಹೋರಾಟ ರೂಪಿಸಲಿದೆ ಎಂದು ಅವರು ಎಚ್ಚರಿಸಿದರು.
ಕಲಬುರಗಿ ಜಿಲ್ಲೆಯ ಕೋಲಿ ಸಮಾಜದ ಜನಸಂಖ್ಯೆ ಹೆಚ್ಚಿರುವ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಕಮಕನೂರ ಅವರಿಗೆ ಅವಕಾಶ ನೀಡಿದರೆ ನೂರಕ್ಕೆ ನೂರು ಗೆಲುವು ಸಾಧಿಸುವ ಸಾಮಥ್ರ್ಯ ಅವರಲ್ಲಿದೆ ಎಂಬ ವಿಷಯವನ್ನು ಕಾಂಗ್ರೆಸ್ ಹೈಕಮಾಂಡ್ ಮನಗಾಣಬೇಕು, ಅವರನ್ನು ಕಡೆಗಣಿಸುವುದು ಎಂದರೆ ಸಮಗ್ರ ಕೋಲಿ ಗಂಗಾಮನ ಕಬ್ಬಲಿಕ ಸಮಾಜವನ್ನು ಕಡೆಗಣಿಸಿದಂತಾಗುತ್ತದೆ ಎಂಬ ಸಂದೇಶವನ್ನು ಈ ಮೂಲಕ ಸರ್ಕಾರಕ್ಕೆ ನೀಡಲಾಗುತ್ತದೆ ಎಂದು ಅವರು ಹೇಳಿದರು.
ಸಾರ್ವತ್ರಿಕ ಚುನಾವಣೆ ಸಮಯದಲ್ಲಿ ಮಾತ್ರ ಹಿಂದುಳಿದ ಕೋಲಿ ಸಮಾಜವನ್ನು ಬಳಸಿಕೊಳ್ಳಲಾಗುತ್ತಿದ್ದು, ನಂತರ ಮರೆತು ಬಿಡಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಅಲ್ಪಾವಧಿಯಲ್ಲಿ ವಿಧಾನಪರಿಷತ್ ಸದಸ್ಯರಾಗಿದ್ದ ಸಂದರ್ಭದಲ್ಲಿ ತಿಪ್ಪಣ್ಣಪ್ಪ ಕಮಕನೂರ ಅವರು ಮಾತಾ ಮಾಣಿಕೇಶ್ವರಿ ಅಮ್ಮನವರ ಯಾನಾಗುಂದಿ ಸುಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಸೇರಿದಂತೆ ಸಮಾಜಮುಖಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಇತ್ತೀಚೆಗೆ ಕರ್ನಾಟಕ ವಿಧಾನಸಭೆ ಹಾಗೂ ವಿಧಾನಪರಿಷತ್ ಮುಂಭಾಗದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಸ್ಥಾಪನೆಗೆ ಪ್ರಸ್ತಾವನೆ ಮಂಡಿಸಿರುವುದು ಅವರ ಸಮಾಜಪರ ಕಾಳಜಿಯ ಉದಾಹರಣೆ ಎಂದು ಹೇಳಿದರು.
ಸಮಾಜಕ್ಕೆ ನ್ಯಾಯ ಒದಗಿಸಬೇಕಾದರೆ ಕೋಲಿ ಕಬ್ಬಲಿಗ ಸಮಾಜದ ಪ್ರಭಾವಿ ನಾಯಕ, ವಿಧಾನ ಪರಿಷತ್ ಸದಸ್ಯರಾದ ತಿಪ್ಪಣಪ್ಪ ಕಮನೂರ ಅವರಿಗೆ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನ ನೀಡಬೇಕು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಾಜದ ಪ್ರಮುಖರಾದ ರಾಯಪ್ಪ ಹೊನಗುಂಟಿ, ಅರ್ಜುನ ಜಮಾದಾರ. ಶಾಮರಾವ ಸುಲ್ತಾನಪೂರ, ವಿಜಯಕುಮಾರ ಬಿ. ಹದಗಲ್, ರಮೇಶ ಎಸ್. ಬಿದನೂರು, ಮಲ್ಲಿಕಾರ್ಜುನ ವಾಯ್.ಕೂಡಿ. ದತ್ತು ಬಿ. ಹೊನ್ನಳ್ಳಿ ಸಂಗಮನಾಥ್ ಕಣ್ಣಿ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.