
ತುಮಕೂರು, ಡಿ. ೮- ಜಿಲ್ಲಾ ಮಂಡಿ ಹಮಾಲಿ ಮತ್ತು ಕೂಲಿ ಕಾರ್ಮಿಕರ ಸಂಘದಿಂದ ನಗರದ ಎಪಿಎಂಸಿ ಯಾರ್ಡಿನ ಸಂಘದ ಕಚೇರಿಯಲ್ಲಿ ಬಿ.ಆರ್.ಅಂಬೇಡ್ಕರ್ ಅವರ ೬೯ನೇ ಮಹಾ ಪರಿನಿರ್ವಾಣ ದಿನ ಆಚರಿಸಿ ಸಂವಿಧಾನ ಶಿಲ್ಪಿಗೆ ಗೌರವ ಸಲ್ಲಿಸಲಾಯಿತು.
ಸಂಘದ ಪದಾಧಿಕಾರಿಗಳು ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರ ಕೊಡುಗೆ ಸ್ಮರಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಚಿಕ್ಕಹನುಮಂತಯ್ಯ ಮಾತನಾಡಿ, ಅಂಬೇಡ್ಕರ್ ಅವರು ಶ್ರೇಷ್ಠ ಸಂವಿಧಾನ ನೀಡಿ ನಮ್ಮಂತಹ ಕೂಲಿ ಕಾರ್ಮಿಕರು, ಶೋಷಿತರು ಸ್ವಾಭಿಮಾನದಿಂದ ಬಾಳುವಂತಹ ಶಕ್ತಿ ತಂದು ಕೊಟ್ಟಿದ್ದಾರೆ. ಎಲ್ಲ ವೃತ್ತಿಗಳನ್ನು ಗೌರವಿಸುವಂತಹ, ಎಲ್ಲರೂ ಸಮಾನವಾಗಿ ಬಾಳುವಂತಹ ಸಮ ಸಮಾಜ ನಿರ್ಮಾಣಕ್ಕೆ ನೆರವಾಗಿದ್ದಾರೆ ಎಂದರು.
ಅಂಬೇಡ್ಕರ್ ಅವರು ಶೋಷಿತರ ಪರವಾದ ಹೋರಾಟ, ಸಂವಿಧಾನ ರಚನೆ ಮಾಡದಿದ್ದರೆ ಅನೇಕ ಸಮುದಾಯಗಳು ಇನ್ನೂ ಗುಲಾಮಗಿರಿಯಲ್ಲೇ ನರಳಬೇಕಾಗಿತ್ತು. ಇಂತಹ ಅಂಬೇಡ್ಕರ್ ಅವರು ನಮ್ಮ ಪಾಲಿನ ದೇವರಾಗಿದ್ದಾರೆ. ಅವರು ಕೊಟ್ಟ ಕೊಡುಗೆಗಳನ್ನು ಅನುಸರಿಸಿಕೊಂಡು ಸದಾ ಅವರನ್ನು ಸ್ಮರಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಮೂರ್ತಿ, ಕಾರ್ಯದರ್ಶಿ ಕೆ.ಹುಚ್ಚಹನುಮಯ್ಯ, ಸಹ ಕಾರ್ಯದರ್ಶಿ ರಾಮಚಂದ್ರ, ಖಜಾಂಚಿ ತರಕಾರಿ ಮಾರುಕಟ್ಟೆ ನಾಗರಾಜು, ನಿರ್ದೇಶಕರಾದ ಕೆಂಪಯ್ಯ, ಎಲ್.ಡಿ.ಪೂಜಯ್ಯ, ಟಿ.ವಿ.ಕಂಭಯ್ಯ, ಎಲ್.ಡಿ.ಕುಂಭಯ್ಯ ಸೇರಿದಂತೆ ಎಪಿಎಂಸಿ ಕಾರ್ಮಿಕರು ಭಾಗವಹಿಸಿದ್ದರು.


























