Home ಜಿಲ್ಲೆ ಪೌರ ಕಾರ್ಮಿಕರ ಹಸ್ತದಿಂದ “ಅಂಬೇಡ್ಕರ್ ಹಬ್ಬ – ೨೦೨೬” ಲಾಂಛನ ಬಿಡುಗಡೆ

ಪೌರ ಕಾರ್ಮಿಕರ ಹಸ್ತದಿಂದ “ಅಂಬೇಡ್ಕರ್ ಹಬ್ಬ – ೨೦೨೬” ಲಾಂಛನ ಬಿಡುಗಡೆ

ಸಂಜೆವಾಣಿ ವಾರ್ತೆ,
ವಿಜಯಪುರ, ಮಾ. ೧೨: ದಲಿತ ವಿದ್ಯಾರ್ಥಿ ಪರಿಷತ್ ಹಾಗೂ ಸಹಭಾಗಿ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಸಂವಿಧಾನ ಶಿಲ್ಪಿ ಡಾ ಬಾಬಾಸಾಹೇಬ್ ಅಂಬೇಡ್ಕರ್ ಅವರ ೧೩೫ ನೇ ಜಯಂತಿ ಪ್ರಯುಕ್ತ “ಅಂಬೇಡ್ಕರ್ ಹಬ್ಬ – ೨೦೨೬” ಕಾರ್ಯಕ್ರಮದ ಲಾಂಛನವನ್ನು ಪೌರ ಕಾರ್ಮಿಕರ ಹಸ್ತದಿಂದ ಬಿಡುಗಡೆ ಮಾಡಲಾಯಿತು.
ನಗರದ ಬೆಂಗಳೂರು ರೆಸ್ಟಾರೆಂಟ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಂಬೇಡ್ಕರ್ ಹಬ್ಬ – ೨೦೨೬ ರ ಲಾಂಛನವನ್ನು ವಿಜಯಪುರ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರಾದ ಲಕ್ಷ್ಮಿ ಹಿಟನಳ್ಳಿ, ಮಹಾದೇವಿ ಹಾದಿಮನಿ, ದಯಾನಂದ್ ಅಲಿಯಬಾದ ಅವರು ಬಿಡುಗಡೆ ಮಾಡುವ ಮೂಲಕ ಅಂಬೇಡ್ಕರ್ ಹಬ್ಬ – ೨೦೨೬ ರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ಗೋಷ್ಠಿ ಉದ್ದೇಶಿಸಿ ಮಾತನಾಡಿದ ದಲಿತ ವಿದ್ಯಾರ್ಥಿ ಪರಿಷತ್ ನ ರಾಜ್ಯಾಧ್ಯಕ್ಷ ಶ್ರೀನಾಥ ಪೂಜಾರಿ, ಕಳೆದ ವರ್ಷವೂ ಬಹಳ ಅರ್ಥಪೂರ್ಣವಾಗಿ ಅಂಬೇಡ್ಕರ್ ಹಬ್ಬ ಕಾರ್ಯಕ್ರಮವು ಆಚರಣೆ ಮಾಡಲಾಗಿದೆ. ಅದರಂತೆಯೇ ಈ ವರ್ಷವೂ “ಅಂಬೇಡ್ಕರ್ ಹಬ್ಬ” ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದರು.
ಕಳೆದ ವರ್ಷದಂತೆ ಈ ವರ್ಷವೂ ಅಂಬೇಡ್ಕರ್ ಹಬ್ಬ ಏಪ್ರಿಲ್ ೧೧ ರಿಂದ ೧೪ ರವರೆಗೆ ನಡೆಯಲಿದೆ. ನಾಲ್ಕು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮವೂ ಏಪ್ರಿಲ್ ೧೧ ರಂದು ಜ್ಯೋತಿಬಾ ಫುಲೆ ಅವರ ಜನ್ಮದಿನದಂದು ಭವ್ಯ ಮೆರವಣಿಗೆ ಮೂಲಕ ಚಾಲನೆ ನೀಡಲಾಗುತ್ತಿದೆ. ನಾಲ್ಕು ದಿನಗಳ ಅಂಬೇಡ್ಕರ್ ಹಬ್ಬದಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಹೋರಾಟ, ವಿದ್ಯಾರ್ಥಿ ಯುವಜನರ ಹೋರಾಟಗಳ ಬಗ್ಗೆ ಉಪನ್ಯಾಸ, ಚರ್ಚೆ, ಸಂವಾದ ಕಾರ್ಯಕ್ರಮ ನಡೆಯಲಿವೆ. ಬುದ್ಧ, ಬಸವ, ಅಂಬೇಡ್ಕರ್ ವಿಚಾರಧಾರೆಯೊಂದಿಗೆ ಸಾಗುತ್ತಿರುವ ರಾಜ್ಯ, ರಾಷ್ಟ್ರೀಯ ಮಟ್ಟದ ಪ್ರಗತಿಪರ ಚಿಂತಕರು, ಸಾಹಿತಿಗಳು, ಕಲಾವಿದರು ಪಾಲ್ಗೊಳ್ಳುವರು. ನಾಲ್ಕು ದಿನ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಾಟಕಗಳು, ಕವಿ ಗೋಷ್ಠಿ ಇರಲಿವೆ ಜೊತೆಗೆ ವಿವಿಧ ಸ್ಪರ್ಧೆಗಳ ಆಯೋಜನೆ ಮಾಡಲಾಗುತ್ತಿದೆ. ಕಳೆದ ವರ್ಷದಂತೆ ಈ ವರ್ಷವೂ ಸಹ ಅನೇಕ ಸಮಾನ ಮನಸ್ಕ ಸಂಸ್ಥೆಗಳು ಜೊತೆಗೂಡುತ್ತಿರುವದು ಖುಷಿಯ ಸಂಗತಿಯಾಗಿದೆ ಎಂದು ಶ್ರೀನಾಥ ಪೂಜಾರಿ ಹೇಳಿದರು.
ಗೋಷ್ಠಿಯಲ್ಲಿ ಭಾಗಿಯಾದ ವೇದ ಅಕ್ಯಾಡೆಮಿ ಮುಖ್ಯಸ್ಥರಾದ ಶಿವಾನಂದ ಕೆಲ್ಲೂರು ಮಾತಾಡಿ, ನಾಲ್ಕು ದಿನಗಳ ಕಾಲ ನಡೆಯುವ ಅಂಬೇಡ್ಕರ್ ಹಬ್ಬ ಕಾರ್ಯಕ್ರಮದಲ್ಲಿ ದಲಿತ, ಮಹಿಳಾ ಸಬಲೀಕರಣ ಕುರಿತು ಉಪನ್ಯಾಸ ಕಾರ್ಯಕ್ರಮ ಇರಲಿದೆ. ಎಲ್ಲ ವರ್ಗಗಳ ಜನರು ಇದರಲ್ಲಿ ಭಾಗಿಯಾಗಲಿದ್ದಾರೆ. ಜಿಲ್ಲೆಯ ಜನರು ಅಲ್ಲದೇ ವಿವಿಧ ಜಿಲ್ಲೆಗಳ ಜನರು ಅಂಬೇಡ್ಕರ್ ಹಬ್ಬ ಕಾರ್ಯಕ್ರಮದಲ್ಲಿ ಬರಲಿದ್ದಾರೆ. ಇವತ್ತು ಲಾಂಛನ ಬಿಡುಗಡೆ ಮಾಡುವ ಮೂಲಕ ಅಂಬೇಡ್ಕರ್ ಹಬ್ಬಕ್ಕೆ ಅರ್ಥಪೂರ್ಣವಾಗಿ ಚಾಲನೆ ನೀಡಲಾಗಿದೆ ಎಂದರು.
ಈ ವೇಳೆ ಪರಿಷತ್ತಿನ ರಾಜ್ಯ ಸಂಚಾಲಕ ಬಾಲಾಜಿ ಕಾಂಬಳೆ, ಪೌರ ಕಾರ್ಮಿಕ ಸಂಘದ ಲಕ್ಷ್ಮಣ ಹಂದ್ರಾಳ, ರೈತ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಸಗರ, ಸಹ ಸಂಚಾಲಕ ಮಹಾದೇವ ಚಲವಾದಿ, ಹುಚ್ಚಪ್ಪ ಭಾವಿಮನಿ, ವಿರೇಶ, ಲತಾ ರಾಠೋಡ ಇನ್ನಿತರು ಉಪಸ್ಥಿತರಿದ್ದರು.