ಅಮರೇಶ್ವರ ಜಾತ್ರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ : ಜಾತ್ರಾ ಪ್ರಚಾರಾರ್ಥ ಭಿತ್ತಿ ಪತ್ರ ಬಿಡುಗಡೆ

ಔರಾದ : ಫೆ.೭:ಪಟ್ಟಣದ ಐತಿಹಾಸಿಕ ಹಿನ್ನಲೆಯ ಸುಪ್ರಸಿದ್ಧ ಉದ್ಭವಲಿಂಗ ಶ್ರೀ ಅಮರೇಶ್ವರರ ಜಾತ್ರಾ ಮಹೋತ್ಸವಕ್ಕೆ ನೂರಾರು ಭಕ್ತರ ಸಮ್ಮುಖ ದೇವಸ್ಥಾನದ ಆವರಣದಲ್ಲಿ ರಥವನ್ನು ಜೋಡಿಸಿ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಶುಕ್ರವಾರ ತಹಸೀಲ್ದಾರ ಮಹೇಶ ಪಾಟೀಲ ಅವರು ವಿದ್ಯುಕ್ತವಾಗಿ ಚಾಲನೆ ನೀಡಿದರು.
ಐತಿಹಾಸಿಕ ಶ್ರೀ ಅಮರೇಶ್ವರ ಜಾತ್ರೆಯು ಪ್ರತಿ ವರ್ಷದಂತೆ ಅರ್ಥಪೂರ್ಣವಾಗಿ ಆಚರಿಸಲಾಗುವುದು, ಸತತವಾಗಿ ವಾರದ ಕಾಲ ನಡೆಯುವ ಐತಿಹಾಸಿಕ ಜಾತ್ರೆಗೆ ನೆರೆಯ ಮಹಾರಾಷ್ಟ್ರ ತೆಲಂಗಾಣ ರಾಜ್ಯದ ಭಕ್ತರು ಆಗಮಿಸುತ್ತಾರೆ. ಫೇ.೧೨ರಿಂದ ಫೇ.೨೩ ವರೆಗೆ ನಡೆಯುವ ಜಾತ್ರಾ ಮಹೋತ್ಸವ ಯಶಸ್ವಿಗೆ ಎಲ್ಲಾ ಸಂಘ ಸಂಸ್ಥೆಗಳು ಹಾಗೂ ಮುಖಂಡರು ಮತ್ತು ಎಲ್ಲಾ ಅಧಿಕಾರಿ ವರ್ಗದವರು ಸಹಕರಿಸಬೇಕು ತಹಸೀಲ್ದಾರ ಮಹೇಶ ಪಾಟೀಲ ತಿಳಿಸಿದ್ದಾರೆ.
ಫೇ.೧೨ ರಿಂದ ಪ್ರತಿ ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಜನೆ, ಕೀರ್ತನೆಗಳು ನಡೆಯಲಿವೆ. ಫೇ.೧೨ ಪಾದಪೂಜಾ, ೧೩ ರಂದು ಭಜನೆ ಕಿರ್ತನೆ, ೧೪ ರಂದು ಸಂಗೀತ ದರ್ಬಾರ, ೧೫ ರಂದು ಅಗ್ನಿಪೂಜೆ, ೧೬ ರಂದು ರಥೋತ್ಸವ, ೧೭ ರಂದು ಜಂಗಿ ಕುಸ್ತಿ, ಫೆಬ್ರುವರಿ ೨೩ ರಂದು ಪಶು ಪ್ರದರ್ಶನ ಜರುಗಲಿದೆ ಎಂದು ತಿಳಿಸಿದ್ದಾರೆ.
ಈ ಸಂಧರ್ಭದಲ್ಲಿ ಅಮರೇಶ್ವರ ದೇವಸ್ಥಾನ ಸಮಿತಿ ಮಾಜಿ ಅಧ್ಯಕ್ಷ ಬಸವರಾಜ ದೇಶಮುಖ ಅವರು ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಅಮರೇಶ್ವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಸಡಗರ ಸಂಭ್ರಮದಿAದ ಆಚರಿಸಲಾಗುತ್ತದೆ, ಯುವ ಸಮೂಹ ಜಾತ್ರೆಯಲ್ಲಿ ಪಾಲ್ಗೊಂಡು ಅಹಿತಕರ ಘಟನೆ ನಡೆಯದಂತೆ ಹಾಗೂ ನೆರೆಯ ಆಂಧ್ರ, ಮಹಾರಾಷ್ಟ್ರ, ತೆಲಂಗಾಣ ರಾಜ್ಯದ ಭಕ್ತರು ಪಾಲ್ಗೊಳ್ಳುತ್ತಾರೆ, ಯುವಕರು ಜಾತ್ರೆಯಲ್ಲಿ ತನು ಮನದಿಂದ ಸಹಕರಿಸಿ ಜಾತ್ರಾ ಯಶಸ್ವಿಗೊಳಿಸಬೇಕೆಂದು ತಿಳಿಸಿದರು. ಈ ವೇಳೆ ಜಾತ್ರಾ ಮಹೋತ್ಸವದ ಪ್ರಚಾರಾರ್ಥ ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಿದರು.
ಈ ಸಂಧರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಕಿರಣ ಪಾಟೀಲ, ಪಪಂ ಮುಖ್ಯಾಧಿಕಾರಿ ಸ್ವಾಮಿದಾಸ, ಡಾ.ಶಂಕರರಾವ ದೇಶಮುಖ, ಸುನೀಲಕುಮಾರ ದೇಶಮುಖ, ಸುಭಾಷ ನಿರ್ಮಳೆ, ಬಸವರಾಜ ಚ್ಯಾರೆ, ಶಿವರಾಜ ಅಲ್ಮಾಜೆ, ಮಹಾದೇವ ಮುದ್ದಾ, ವಿಠ್ಠಲರಾವ ಕೋಳಿ, ಮೋಹನ ಕೇದಾರೆ, ಸಿದ್ರಾಮ ಬಾವಗೆ, ಅಮರೇಶ ಮಸಕಲೆ, ಶ್ರೀಕಾಂತ ಅಲ್ಮಾಜೆ, ಸಂತೋಷ ಕೋಳಿ, ಸೂರ್ಯಕಾಂತ ಚ್ಯಾರೆ, ಶಿವಾನಂದ ಕನಕೆ, ಆನಂದ ಪಾಂಚಾಳ, ಆನಂದ ದ್ಯಾಡೆ, ಅಮರಸ್ವಾಮಿ ಸ್ಥಾವರಮಠ, ಈಶ್ವರ ಚಿಟಮೇ, ಸಚಿನ ಪಂಚಾಕ್ಷರಿ, ಅಮರ ತೇಲಿ, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.