ಸ್ಥಳೀಯ ಸಂಸ್ಥೆ ಚುನಾವಣೆ ಜೆಡಿಎಸ್ ಜೊತೆ ಮೈತ್ರಿ: ಹೈಕಮಾಂಡ್ ನಿರ್ಧಾರ

ಬೆಂಗಳೂರು, ಡಿ. ೨೭- ಸ್ಥಳೀಯ ಸಂಸ್ಥೆಗಳಲ್ಲಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳುವ ಸಂಬಂಧ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲಾ ಬದ್ಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.


ಬೆಂಗಳೂರಿನಲ್ಲಿಂದು ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್ ಜತೆ ಮೈತ್ರಿ ಇಲ್ಲ ಎಂದು ನಾವ್ಯಾರು ಎಲ್ಲೂ ಹೇಳಿಲ್ಲ. ಅಂತಿಮವಾಗಿ ನಮ್ಮ ವರಿಷ್ಠರು ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಕುಮಾರಸ್ವಾಮಿಯವರ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಾರೆ. ಆ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ ಎಂದರು.


ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ನಮಗೆ ಗೌರವ ಇದೆ. ಅವರು ಮುತ್ಸದ್ಧಿಗಳು. ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಜತೆ ಮೈತ್ರಿ ಇಲ್ಲ ಎಂಬ ದೇವೇಗೌಡರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸುವ ಅಗತ್ಯವಿಲ್ಲ. ವರಿಷ್ಠರು ಈ ಗೊಂದಲಗಳನ್ನು ಪರಿಹರಿಸುತ್ತಾರೆ. ವರಿಷ್ಠರು ಏನು ಹೇಳುತ್ತಾರೋ ಅದನ್ನು ಕೇಳುತ್ತೇವೆ ಎಂದು ಸ್ಪಷ್ಟಪಡಿಸಿದರು.


ಮೊನ್ನೆ ನಡೆದ ಕೆಲ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದಿದೆ. ಕಾರ್ಯಕರ್ತರ ಆಕಾಂಕ್ಷೆಯಂತೆ ಅಧ್ಯಕ್ಷನಾಗಿ ನಾನು ಮಾತನಾಡುವುದು ನನ್ನ ಕರ್ತವ್ಯ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು. ಆ ಮೂಲಕ ಮೋದಿಯವರ ಕೈ ಬಲಪಡಿಸಬೇಕು ಎಂಬುದು ನಮ್ಮ ಮತ್ತು ಜೆಡಿಎಸ್ ನಾಯಕರ ಅಪೇಕ್ಷೆಯಾಗಿದೆ ಎಂದು ಅವರು ಹೇಳಿದರು.


ನರೇಗಾ ಯೋಜನೆಯ ಹೆಸರನ್ನು ಬದಲಾಯಿಸಿರುವುದಕ್ಕೆ ಕಾಂಗ್ರೆಸ್‌ನವರು ಪ್ರಧಾನಿ ಮೋದಿಯವರನ್ನು ಟೀಕೆ ಮಾಡುತ್ತಿರುವುದು ಸರಿಯಲ್ಲ. ಮಹಾತ್ಮಗಾಂಧಿ ಬಗ್ಗೆ ಕಾಂಗ್ರೆಸ್ ಪಕ್ಷ ಮೊಸಳೆ ಕಣ್ಣೀರು ಹಾಕುತ್ತಿದೆ. ಮಹಾತ್ಮಗಾಂಧಿ, ಸರ್ದಾರ್ ವಲ್ಲಭಭಾಯಿ ಪಟೇಲ್, ಅಂಬೇಡ್ಕರ್‌ರವರ ಸ್ಮಾರಕ ನಿರ್ಮಾಣ ಮಾಡಿರುವುದು ಎನ್‌ಡಿಎ, ಕಾಂಗ್ರೆಸ್ ಅಲ್ಲ. ಗಾಂಧೀಜಿಯವರ ಸಬರಮತಿ ಆಶ್ರಮವನ್ನು ಅಭಿವೃದ್ಧಿ ಮಾಡಿದ್ದು ಎನ್‌ಡಿಎ ಎಂದರು.


ಪ್ರಧಾನಿ ಮೋದಿಯವರು ಹಿಂದುಳಿದ ವರ್ಗಕ್ಕೆ ಸೇರಿದ್ದಾರೆ. ಆದರೂ ಅವರನ್ನು ಕಾಂಗ್ರೆಸ್ ಪಕ್ಷ ಸಹಿಸುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹೆಚ್ಚು ಟೀಕೆ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರಿಗೆ ಮೋದಿಯವರ ಜನಪ್ರಿಯತೆ ಸಹಿಸಲು ಆಗುತ್ತಿಲ್ಲ. ಹಾಗಾಗಿ ವೃತಾ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಕಾಂಗ್ರೆಸ್ ಪಕ್ಷದವರಿಗೆ ಗಾಂಧೀಜಿಯವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಅವರು ಹೇಳಿದರು.


ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ವಸತಿ ಸಚಿವ ಜಮೀರ್ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ರವರ ಮನೆ ಮೇಲೆ ಲೋಕಾಯುಕ್ತ ದಾಳಿಯಾಗಿದೆ. ಅವರ ಮನೆಯಲ್ಲಿ ೧೪ ಕೋಟಿ ರೂ. ವಶಪಡಿಸಿಕೊಳ್ಳಲಾಗಿದೆ. ಇಷ್ಟಾದರೂ ಸರ್ಕಾರ ಏನೂ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಮೃದು ಧೋರಣೆ ಅನುಸರಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜನರಿಗೆ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.


ಕಾಂಗ್ರೆಸ್ ಸರ್ಕಾರ ಯಾವುದೇ ಟೀಕೆ ಸಹಿಸಲ್ಲ. ಇದೊಂದು ಅಸಹಿಷ್ಣು ಸರ್ಕಾರ. ರಾಜ್ಯದಲ್ಲಿ ದ್ವೇಷ ಭಾಷಣ ಮಸೂದೆ ತಂದಿದೆ. ಈ ಮಸೂದೆ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆಗೆ ಮುಂದಾಗಿದೆ ಎಂದು ಟೀಕಿಸಿ, ದ್ವೇಷ ಭಾಷಣ ಮಸೂದೆ ಪ್ರಜಾಪ್ರಭುತ್ವ ವಿರೋಧಿ ಎಂದರು.


ಬೆಳಗಾವಿಯಲ್ಲಿ ನಡೆದ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಸುದೀರ್ಘ ಚರ್ಚೆಯಾಯಿತು. ಆದರೆ ಸರ್ಕಾರ ಸರಿಯಾದ ಸ್ಪಂದನೆ ವ್ಯಕ್ತ ಮಾಡಲಿಲ್ಲ. ನೀರಾವರಿ ಸಮಸ್ಯೆ, ಕಾನೂನ ಸುವ್ಯವಸ್ಥೆ, ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಸಮರ್ಪಕ ಉತ್ತರ ಕೊಡಲಿಲ್ಲ ಎಂದು ಅವರು ದೂರಿದರು.


ಅಧಿವೇಶನದ ಸಂದರ್ಭದಲ್ಲಿ ಸಚಿವರುಗಳು, ಡಿನ್ನರ್, ಬ್ರೇಕ್ ಫಾಸ್ಟ್ ಮೀಟಿಂಗ್‌ನಲ್ಲೇ ಕಾಲ ಹರಣ ಮಾಡಿದರು. ಯಾವುದೇ ಜ್ವಲಂತ ಸಮಸ್ಯೆಗಳಿಗೆ ಉತ್ತರ ಕೊಡಲಿಲ್ಲ. ಅಧಿವೇಶನ ಸಂದರ್ಭದಲ್ಲೂ ಕುರ್ಚಿ ಕಚ್ಚಾಟ ಮುಂದುವರೆಸಿದರು. ಯಾವ ಪುರುಷಾರ್ಥಕ್ಕೆ ಅಧಿವೇಶನ ನಡೆಸಿದರು ಎಂದು ಹರಿಹಾಯ್ದರು.
ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಸಿ ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೆಲಸ ನಡೆಯಿತು. ರಾಜ್ಯ ಸರ್ಕಾರದ ಬೇಜವಾಬ್ದಾರಿ ಬಗ್ಗೆ ನಾವು ಧರ್ಮಸ್ಥಳ ಚಲೋ ನಡೆಸಿದೆವು. ಇಷ್ಟೆಲ್ಲಾ ಆದರೂ ಮುಖ್ಯಮಂತ್ರಿಗಳು ಕ್ಷಮೆ ಕೇಳಲಿಲ್ಲ. ಧರ್ಮಸ್ಥಳದ ವಿರುದ್ಧ ಷಡ್ಯಂತ್ರದ ಹಿಂದಿನ ಕೈಗಳ ಹೆಸರುಗಳನ್ನು ಸರ್ಕಾರ ಬಹಿರಂಗ ಮಾಡಿಲ್ಲ ಎಂದು ಟೀಕಿಸಿದರು.


ಈ ಸರ್ಕಾರದಲ್ಲಿ ಬಂಡವಾಳ ಹೂಡಿಕೆ ಸ್ನೇಹಿ ನೀತಿಗಳಿಲ್ಲ. ಹಾಗಾಗಿ ದೊಡ್ಡ ದೊಡ್ಡ ಉದ್ಯಮಗಳು ಹೊರ ರಾಜ್ಯಕ್ಕೆ ಹೋಗುತ್ತಿವೆ. ಟಯೊಟಾ. ಫಾಕ್ಸಕಾನ್ ನಮ್ಮ ಕೈ ತಪ್ಪಿದೆ ಎಂದು ದೂರಿದರು.