
ಯಾದಗಿರಿ: ಜಿಲ್ಲೆಯ ಕಿಲ್ಲನಕೇರಾ ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬವೊAದಕ್ಕೆ ಸಾಮಾಜಿಕ ಬಹಿಷ್ಕಾರ ಹೇರಿ, ಊರು ತೊರೆಯುವಂತೆ ಜೀವ ಬೆದರಿಕೆ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಗ್ರಾಮದ ಮರೆಮ್ಮ ಹಾಗೂ ಅವರ ಕುಟುಂಬಸ್ಥರು ಈ ಕುರಿತು ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿ, ಘಟನೆ ಕುರಿತು ಸಮಗ್ರ ತನಿಖೆ ನಡೆಸಿ ಕುಟುಂಬಕ್ಕೆ ರಕ್ಷಣೆ ಒದಗಿಸುವಂತೆ ಕೋರಿದ್ದಾರೆ.
ಮರೆಮ್ಮ ಅವರು ನೀಡಿರುವ ಮನವಿಯ ಪ್ರಕಾರ, ಹಂದಿ ಸಾಕಾಣಿಕೆ ವಿಚಾರವಾಗಿ ಗ್ರಾಮದಲ್ಲಿ ಉಂಟಾದ ವಿವಾದವು ಬಳಿಕ ಜಾತಿನಿಂದನೆ, ಹಲ್ಲೆ ಮತ್ತು ಜೀವ ಬೆದರಿಕೆ ಆರೋಪಗಳಿಗೆ ಕಾರಣವಾಗಿದೆ. ಹಂದಿಗಳನ್ನು ನೋಡಲು ತೆರಳಿದ್ದ ಸಂದರ್ಭದಲ್ಲಿ ಕೆಲವರು ಜಾತಿ ಹೆಸರಿನಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ. ತಮ್ಮ ಪತಿ ಮಾರೆಪ್ಪ ಅವರ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಘಟನೆ ಕುರಿತು ದೂರು ನೀಡಲು ಸೈದಾಪುರ ಪೊಲೀಸ್ ಠಾಣೆಗೆ ತೆರಳಿದಾಗ ದೂರು ಸ್ವೀಕರಿಸದೆ ಠಾಣೆಯ ಹೊರಗಡೆ ಕೂರಿಸಲಾಯಿತು. ಬಳಿಕ ಸಂಬAಧಪಟ್ಟವರನ್ನು ಕರೆಸಿ ಮಾತನಾಡಿ, ದೂರು ನೀಡದಂತೆ ಹಾಗೂ ಊರು ತೊರೆಯುವಂತೆ ಸೂಚಿಸಲಾಯಿತು ಎಂದು ಮರೆಮ್ಮ ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಪೊಲೀಸ್ ಠಾಣೆಯಿಂದ ಹೊರಬಂದ ಬಳಿಕವೂ ಕೆಲವರು ತಮ್ಮನ್ನು, ಪತಿ ಹಾಗೂ ಮಗನ ಮೇಲೆ ಹಲ್ಲೆ ನಡೆಸಿ, ‘ಊರು ಬಿಡಿಸುತ್ತೇವೆ’ ಎಂದು ಬೆದರಿಕೆ ಹಾಕಿದ್ದಾರೆ. ಇದರಿಂದ ಜೀವ ಭಯ ಉಂಟಾಗಿದ್ದು, ಕುಟುಂಬವು ಸದ್ಯ ಗ್ರಾಮದಿಂದ ಹೊರಗಡೆ ವಾಸಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಪೊಲೀಸ್ ಠಾಣೆಯಲ್ಲಿ ದೂರು ನೀಡಲು ತೆರಳಿದ ಸಂದರ್ಭದಲ್ಲಿಯೇ ಸೂಕ್ತ ರಕ್ಷಣೆ ದೊರೆಯಲಿಲ್ಲ ಎಂಬ ಕುಟುಂಬದ ಆರೋಪವೂ ಮನವಿಯಲ್ಲಿ ಉಲ್ಲೇಖವಾಗಿದೆ. ಹೀಗಾಗಿ ಪ್ರಕರಣದ ಕುರಿತು ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ವಾಸ್ತವಾಂಶ ಪರಿಶೀಲನೆ ನಡೆಸುವುದು ಅಗತ್ಯವಾಗಿದೆ.
ಮರೆಮ್ಮ ಅವರು ಮಾಡಿರುವ ಆರೋಪಗಳು ಸದ್ಯ ದೃಢಪಟ್ಟಿಲ್ಲ. ಘಟನೆಗೆ ಸಂಬAಧಿಸಿದ ಸಾಕ್ಷ್ಯಗಳು, ಆರೋಪಿತ ವ್ಯಕ್ತಿಗಳ ಹೇಳಿಕೆಗಳು ಹಾಗೂ ಪೊಲೀಸ್ ಠಾಣೆಯ ದಾಖಲೆಗಳನ್ನು ಪರಿಶೀಲಿಸಿ ನಿಷ್ಪಕ್ಷಪಾತ ತನಿಖೆ ನಡೆಸಿದ ಬಳಿಕವೇ ಆರೋಪಗಳ ಸತ್ಯಾಸತ್ಯತೆ ಸ್ಪಷ್ಟವಾಗಬೇಕಿದೆ.
ಜಾತಿನಿಂದನೆ, ಹಲ್ಲೆ, ಜೀವ ಬೆದರಿಕೆ ಹಾಗೂ ಸಾಮಾಜಿಕ ಬಹಿಷ್ಕಾರದ ಆರೋಪಗಳು ಸತ್ಯವೆಂದು ತನಿಖೆಯಲ್ಲಿ ದೃಢಪಟ್ಟರೆ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಜತೆಗೆ ಸಂತ್ರಸ್ತ ಕುಟುಂಬಕ್ಕೆ ಅಗತ್ಯ ಭದ್ರತೆ ಒದಗಿಸಬೇಕು ಎಂದು ಕುಟುಂಬಸ್ಥರು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಮರೆಮ್ಮ ಅವರ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.































