
ಯಾದಗಿರಿ:ಏ.೮: ಜಿಲ್ಲೆಯ ಶಹಾಪುರ ತಾಲೂಕಿನ ದೊರನಹಳ್ಳಿ ಪಟ್ಟಣದಲ್ಲಿರುವ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಕುರಿತು ಗಂಭೀರ ಕಳಪೆ ಆರೋಪಗಳು ಕೇಳಿಬಂದಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಮತ್ತು ಅಸಮಾಧಾನ ಉಂಟಾಗಿದೆ.
ಸುಮಾರು ?೬.೫೦ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಬಹುಮಹಡಿ ಆರೋಗ್ಯ ಕಟ್ಟಡವು ೩೦ರಿಂದ ೫೦ ಹಾಸಿಗೆಗಳ ಸೌಲಭ್ಯ ಹೊಂದುವAತೆ ರೂಪಿಸಲಾಗಿದ್ದು, ಭವಿಷ್ಯದಲ್ಲಿ ಸಾವಿರಾರು ಜನರಿಗೆ ಪ್ರಾಥಮಿಕ ಹಾಗೂ ತುರ್ತು ಆರೋಗ್ಯ ಸೇವೆ ಒದಗಿಸುವ ಪ್ರಮುಖ ಕೇಂದ್ರವಾಗಬೇಕಿದೆ. ಆದರೆ ಕಾಮಗಾರಿಯ ಗುಣಮಟ್ಟದ ಬಗ್ಗೆ ಉಂಟಾಗಿರುವ ಅನುಮಾನಗಳು ಯೋಜನೆಯ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತೆ ಮಾಡಿವೆ.
ಈ ಕಾಮಗಾರಿಯನ್ನು ಗುತ್ತಿಗೆದಾರ ತಾಯಪ್ಪ ಯಾದವ್ ಹಾಗೂ ಇಂಜಿನಿಯರ್ ರವಿ ಯಾದವ್ ನೇತೃತ್ವದಲ್ಲಿ ಕೈಗೊಳ್ಳಲಾಗುತ್ತಿದ್ದು, ಕಟ್ಟಡದ ಮೇಲ್ಭಾಗದ ನಿರ್ಮಾಣದಲ್ಲಿ ನಿರ್ಲಕ್ಷ್ಯ ಮತ್ತು ಕಳಪೆ ಸಾಮಗ್ರಿ ಬಳಕೆಯಾಗಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿವೆ.
ಈ ಕುರಿತು ಸಾಮಾಜಿಕ ಹೋರಾಟಗಾರ ಭೀಮು ಸಾವೂರು ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ಮಹೇಶ್ ಬಿರಾದರ್ ಅವರಿಗೆ ಮನವಿ ಸಲ್ಲಿಸಿದ್ದು, ಜೊತೆಗೆ ಯಾದಗಿರಿ ಜಿಲ್ಲೆಯ ಉನ್ನತ ಅಧಿಕಾರಿಗಳ ಗಮನಕ್ಕೂ ವಿಷಯವನ್ನು ತಂದಿದ್ದಾರೆ. ತಕ್ಷಣವೇ ಸ್ಥಳ ಪರಿಶೀಲನೆ ನಡೆಸಿ, ಕಾಮಗಾರಿಯ ಗುಣಮಟ್ಟವನ್ನು ಪರೀಕ್ಷಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಇನ್ನೊಂದೆಡೆ, ಕಾಮಗಾರಿಯ ಬಗ್ಗೆ ಧ್ವನಿ ಎತ್ತುತ್ತಿರುವವರ ಮೇಲೆ ಒತ್ತಡ ತರುವ ಪ್ರಯತ್ನಗಳೂ ನಡೆಯುತ್ತಿವೆ ಎಂಬ ಆರೋಪ ಕೇಳಿಬಂದಿದೆ. ಗುತ್ತಿಗೆದಾರ ತಾಯಪ್ಪ ಯಾದವ್ ಅವರು, ಕಾಮಗಾರಿಯ ವಿರುದ್ಧ ಪತ್ರಿಕೆಗಳಿಗೆ ಹೇಳಿಕೆ ನೀಡುತ್ತಿರುವ ಸಾಮಾಜಿಕ ಹೋರಾಟಗಾರರ ವಿವರಗಳನ್ನು ಸಂಗ್ರಹಿಸಿ, ಸ್ಥಳೀಯರ ಮೂಲಕ ಕರೆ ಮಾಡಿ ಬೆದರಿಕೆ ನೀಡಲಾಗುತ್ತಿದೆ ಎಂದು ಪತ್ರಕರ್ತರ ಮುಂದೆ ಹೇಳಿಕೆ ನೀಡಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಸಾರ್ವಜನಿಕ ಹಿತಾಸಕ್ತಿಗೆ ಸಂಬAಧಿಸಿದ ಆರೋಗ್ಯ ಕಟ್ಟಡದ ಕಾಮಗಾರಿಯೇ ವಿವಾದಕ್ಕೆ ಗುರಿಯಾಗಿರುವುದು ಜನರಲ್ಲಿ ಅಸಮಾಧಾನ ಹೆಚ್ಚಿಸಿದ್ದು, ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ, ಹೊಣೆಗಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.




















