
ಯಾದಗಿರಿ : ಮೇ.೧೪:ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಪಟ್ಟಣದ ವರ ವಲಯದಲ್ಲಿ ನಡಿತಿರುವ ಅಕ್ರಮ ಮರಂ ಗಣಿಗಾರಿಕೆ ಭಾರೀ ಪ್ರಮಾಣದಲ್ಲಿ ನಡೆಯುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಗ್ರಾಮದ ಸರ್ವೇ ನಂ. ೫೫೦ರಲ್ಲಿ ಸರ್ಕಾರದ ನಿಯಮಗಳನ್ನು ಸಂಪೂರ್ಣ ಉಲ್ಲಂಘಿಸಿ ನಿರಂತರವಾಗಿ ಮರಂ ತೆಗೆಯಲಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ಅಕ್ರಮ ಗಣಿಗಾರಿಕೆಯಿಂದ ಸುತ್ತಮುತ್ತಲಿನ ರೈತರ ಜಮೀನುಗಳು ಹಾನಿಗೊಳಗಾಗುತ್ತಿದ್ದು, ಭೂಮಿಯ ಸ್ವರೂಪವೇ ಬದಲಾಗುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಅನುಮತಿ, ಪರಿಸರ ನಿಯಮಗಳು ಹಾಗೂ ಭೂ ಸಂರಕ್ಷಣಾ ಕಾಯ್ದೆಗಳನ್ನು ಲೆಕ್ಕಿಸದೇ ಮನಬಂದAತೆ ಮರಂ ಸಾಗಣೆ ನಡೆಯುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.
ಗ್ರಾಮದ ಸರ್ಕಾರಿ ಆಸ್ಪತ್ರೆ ಟೋಕೋಪುರ ರಸ್ತೆಯ ಸಮೀಪ, ಕ್ಯಾನಲ್ ಪಕ್ಕದಲ್ಲಿರುವ ಜಮೀನಿನಲ್ಲಿ ಈ ಅಕ್ರಮ ಚಟುವಟಿಕೆ ನಡೆಯುತ್ತಿದ್ದು, ಸಾಬಣ್ಣ ವಿಭೂತಿಹಳ್ಳಿ ಅವರ ನೇತೃತ್ವದಲ್ಲಿ ಮರಂ ಗಣಿಗಾರಿಕೆ ಸಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಜೆಸಿಬಿ ಯಂತ್ರಗಳ ಮೂಲಕ ಮರಂ ತೆಗೆಯಲಾಗುತ್ತಿದ್ದು, ಒಂದು ಟಿಪ್ಪರ್ ತುಂಬಿಸಲು ಸುಮಾರು ?೩,೦೦೦ ವರೆಗೆ ಹಣ ಪಡೆಯಲಾಗುತ್ತಿದೆ ಎನ್ನಲಾಗಿದೆ. ಅಲ್ಲದೆ ಹಳ್ಳಿಯಿಂದ ಬೇರೆ ಊರುಗಳಿಗೆ ಸಾಗಣೆ ಮಾಡುವ ಪ್ರತಿ ಟಿಪ್ಪರ್‌ಗೆ ?೯,೦೦೦ಕ್ಕೂ ಹೆಚ್ಚು ದರ ವಸೂಲಿ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.
ಈ ಕುರಿತು ಮಾದಿಗ ದಂಡೋರ (ರಿ) ಹೋರಾಟ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾವುರ್ ಮಾತನಾಡಿ, “ಅಕ್ರಮ ಗಣಿಗಾರಿಕೆ ಬಹಿರಂಗವಾಗಿ ನಡೆಯುತ್ತಿದ್ದರೂ ಸಂಬAಧಪಟ್ಟ ಅಧಿಕಾರಿಗಳು ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಸ್ಥಳೀಯ ಸಾರ್ವಜನಿಕರು ಕೂಡ ಜಿಲ್ಲಾಡಳಿತ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಅಕ್ರಮ ಮರಂ ಗಣಿಗಾರಿಕೆಗೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದ್ದಾರೆ.
























