
ಚಿಟಗುಪ್ಪ: ತುಕ್ಕಪ್ಪ ರೇವಪ್ಪ ಅವರು ಇಟಗಾ ಗ್ರಾಮ ಪಂಚಾಯಿತಿಯ ಕ್ಲರ್ಕ್-ಕಂ-ಡೇಟಾ ಎಂಟ್ರಿ ಆಪರೇಟರ್ ಹುದ್ದೆಗೆ ಸುಳ್ಳು ದಾಖಲೆಗಳನ್ನು ಸಲ್ಲಿಸಿ ಅನುಮೋದನೆ ಪಡೆದಿರುವ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತಾಳಮಡಗಿ ಗ್ರಾಮದ ಸುನೀಲ ಶ್ರೀಮಂತ ಭಾವಿದೊಡ್ಡಿ ಒತ್ತಾಯಿಸಿದ್ದಾರೆ.
ತಾಲೂಕಿನ ತಾಳಮಡಗಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ದಾಖಲೆಗಳ ಪ್ರಕಾರ, ಸಂಬಂಧಪಟ್ಟ ವ್ಯಕ್ತಿ ಇಟಗಾ ಗ್ರಾಮ ಪಂಚಾಯಿತಿಯಲ್ಲಿ ವಾಟರ್‍ಮ್ಯಾನ್ ಆಗಿ ಸೇವೆ ಸಲ್ಲಿಸಿಲ್ಲ. ಆದರೂ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಕ್ಲರ್ಕ್-ಕಂ-ಡೇಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅನುಮೋದನೆ ಪಡೆದು ನಂತರ ವರ್ಗಾವಣೆ ಹಾಗೂ ನಿಯೋಜನೆ ಮಾಡಿಸಿಕೊಂಡಿ ಸದ್ಯ ತಾಳಮಡಗಿ ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.ಈ ಕುರಿತು ಜೂನ್ 1, 2026ರಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿ, ಸಂಬಂಧಿಸಿದ ದಾಖಲೆಗಳನ್ನು ಲಗತ್ತಿಸಿದ್ದರೂ ಒಂದು ತಿಂಗಳು ಕಳೆದರೂ ಯಾವುದೇ ತನಿಖೆ ನಡೆಸಿ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಸಂಬಂಧಪಟ್ಟ ವ್ಯಕ್ತಿಗೆ ನೆರವು ನೀಡಿದ ಅಧಿಕಾರಿಗಳ ಪಾತ್ರದ ಬಗ್ಗೆಯೂ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಕ್ಲರ್ಕ್-ಕಂ-ಡೇಟಾ ಎಂಟ್ರಿ ಆಪರೇಟರ್ ಹುದ್ದೆಯ ಅನುಮೋದನೆಯನ್ನು ರದ್ದುಗೊಳಿಸಬೇಕು ಎಂದು ಅವರು ಆಗ್ರಹಿಸಿದರು.ಒಂದು ವಾರದೊಳಗೆ ಜಿಲ್ಲಾ ಪಂಚಾಯಿತಿ ಕ್ರಮ ಕೈಗೊಳ್ಳದಿದ್ದರೆ ಗ್ರಾಮ ಪಂಚಾಯಿತಿ ಕಚೇರಿ ಎದುರು ಧರಣಿ ನಡೆಸಲಾಗುವುದು. ಅಲ್ಲದೆ, ಪ್ರಕರಣದ ಕುರಿತು ಲೋಕಾಯುಕ್ತಕ್ಕೆ ದೂರು ಸಲ್ಲಿಸಿ ನ್ಯಾಯಕ್ಕಾಗಿ ಹೋರಾಟ ಮುಂದುವರಿಸಲಾಗುವುದು ಎಂದು ಸುನೀಲ ಎಚ್ಚರಿಕೆ ನೀಡಿದರು.































